ಬಂದು ನಿಂತಿಹ ನೋಡಿ - ಪುರಂದರದಾಸರ ಕೃತಿ
ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ |
ನಿರಂತರ ಪೊಂದಿ ಭಜನೆಯ ಮಾಡಿ ಆ-
ನಂದಗೂಡಿ ಆನಂದಬೇಡಿ ||ಪ||
|| ವಂದಿಸುತ ಮನದೊಳಗೆ ಇವನಡಿ-
ದ್ವಂದ್ವ ಭಜಿಸಲು ಬಂದ ಭಯಹರ |
ಇಂದುಧರ ಸುರ ವೃಂದನುತ ಗೋ-
ವಿಂದ ಘನ ದಯಾಸಿಂಧು ಶ್ರೀಹರಿ ||ಅ.ಪ||
|| ದ್ವಾರ ಎಡಬಲದಲ್ಲಿ ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ-|
ಗಾರ ನಿಧಿ ಅಂಗುಳ್ಳಿ ವಿಸ್ತಾರದಲ್ಲಿ ||
|| ವಾರ ವಾರಕೆ ಪೂಜೆಗೊಂಬುವ | ಹಾರ ಮಕುಟಾಭರಣ ಕುಂಡಲ-
ಧಾರಿ ಭುಜಕೇಯೂರಭೂಷಿತ | ಮಾರಪಿತ ಗುಣ ಮೋಹನಾಂಗ ||
|| ಚಾರುತರ ಕರವೀರ ಕಟಿ | ಕಲ್ಹಾರ ಪೂಜಿತ ಹಾರ
ಕೊರಳೊಳು ಎಸೆಯುತಿರೆ ವದ- | ನಾರವಿಂದನು ನಸುತ ನಲಿಯುತಾ ||೧||
|| ಎಲ್ಲ ಭಕುತರಭೀಷ್ಟ ಕೊಡುವುದಕ್ಕೆ ತಾ ಕೈ-
ವಲ್ಯ ಸ್ಥಾನವ ಬಿಟ್ಟ ಶೇಷಾದ್ರಿ ಮಂದಿರದಲ್ಲಿ |
ಲೋಲುಪದಿಟ್ಟ ಸೌಭಾಗ್ಯನಿಧಿಗೆದುರಿಲ್ಲ
ಬಲಭುಜ ಭೂಷ್ಟ ಕಸ್ತೂರಿಯಿಟ್ಟ ||
|| ಚಲ್ವ ಶಿರದಲಿ ಶೋಭಿಸುವ ಸಿರಿ- | ವಲ್ಲಭನ ಗುಣ ಪೊಗಳದಿಹ ಜಗ-
ಕುಲ್ಲರೆದೆ ಮಲ್ಲ ಮರ್ದನ ಮಾತುಳಾರಿ | ಫಲ್ಗುಣ ಸಖ ಪ್ರಕಟನಾಗಿಹ ||
|| ದುರ್ಲಭನು ಅಘದೂರ ಬಹುಮಾಂಗಲ್ಯ
ಹೃದಯದೊಳಿಟ್ಟವಗೆ ಅಡಿಗಡಿಗೆ ನಗುತ ಶೀಘ್ರದಿ ||೨||
|| ಪದಕ ಕೌಸ್ತುಭದೋರ ಸರಗೀಯ
ಸಂದರುಶನದಿ ವಿಹಾರ ನಿಟ್ಟಿಹನು ಸನ್ಮುನಿ
ಹೃದಯಸ್ಥಿತಿ ಗಂಭೀರ
ಬಹು ದಾನಶೂರ ಬಹು ದಾನಶೂರ ||
|| ವಿಧಿ-ಭವಾದ್ಯರ ಪೊರೆವ ದಾತನು | ತುದಿ-ಮೊದಲು-ಮಧ್ಯಮ ರಹಿತನು
ಉದುಭವಾದಿಗಳೀವ ಕರ್ತನು | ಸದುವಿಲಾಸದಿ ಸ್ವಾಮಿ ತೀರ್ಥದಿ
ಉದಿಸುತಿರೆ ಸಿರಿಮಹಿಳೆ ಸಹಿತ | ಪದುಮನಾಭ ಪುರಂದರವಿಠ್ಠಲನು
ಪ್ರತಿವರ್ಷ ಬ್ರಹ್ಮೋತ್ಸವದಿ ಮೆರೆಯುತಾ ||೩||
ಸರಳ ಕನ್ನಡದಲ್ಲಿ ಕೃತಿಯ ಅರ್ಥ
ಕೃತಿಯು ತಿರುಮಲೆಯಲ್ಲಿ ನಿಂತ ವೆಂಕಟರಮಣನ ಬಣ್ಣಿಸಿ ಕೊಂಡಾಡುತ್ತಿದೆ.
ಶ್ರೀಹರಿಯು ಭೂವೈಕುಂಠವೆಂದೆನಿಸಿದ ತಿರುಮಲೆಗೆ ಲಕ್ಷ್ಮೀ ಸಮೇತ ಬಂದು ನೆಲೆಸಿರುವನು. ಅವನನ್ನು ಭಜಿಸಿ ಆನಂದವನ್ನು ಹೊಂದೋಣ.
ಅನುಪಲ್ಲವಿ: ಶಿವ ಮೊದಲಾದ ದೇವತೆಗಳಿಂದ ಪೂಜಿತನಾದ ಗೋವಿಂದನ ಪಾದಗಳನ್ನು ಭಜಿಸಿದರೆ ಭಯ ನಿವಾರಣೆಯಾಗುವುದು.
ನುಡಿ ೧: ತಿರುಮಲೆಯಲ್ಲಿ ನಿಂತ ಶ್ರೀನಿವಾಸನ ಮಂದಿರದ ಬಾಗಿಲಿನ ಎಡಬಲ ಬದಿಗಳಲ್ಲಿ ಜಯ-ವಿಜಯರು ಬಾಗಿಲು ಕಾಯುತ್ತಲಿರುವರು. ಸನಕಾದಿಗಳು ಸ್ತುತಿಸುವರು. ಶೃಂಗಾರ ಮೂರುತಿಯಾದ ಶ್ರೀನಿವಾಸನನ್ನು ವಿಸ್ತಾರವಾಗಿ ಹಾಡಿ ಹೊಗಳುವರು.
ಪ್ರತಿ ಶುಕ್ರವಾರದಂದು ವಿಶೇಷವಾಗಿ ಪೂಜೆಯಾಗುವ, ಹಾರ-ವಸ್ತ್ರ-ಒಡವೆ-ಕಿವಿಯೋಲೆ-ತೋಳಬಂದಿಗಳಿಂದ ಅಲಂಕೃತನಾದ, ಮನ್ಮಥನ ತಂದೆಯಾದ, ಗುಣಪೂರ್ಣನಾದ, ಎಲ್ಲರ ಮೋಹಿಸುವ ಸೌಂದರ್ಯ ಉಳ್ಳವನಾದ, ಕರವೀರ ಮೊದಲಾದ ಹೂಗಳ ಬಗೆಬಗೆಯ ಹಾರಗಳಿಂದ ಶೋಭಿಸುವ, ಮಂದಹಾಸ ಬೀರುವ ವೆಂಕಟೇಶನ ಭಜಿಸೋಣ.
ನುಡಿ ೨: ಭಕ್ತರ ಬೇಡಿಕೆಗಳನ್ನು ಪೂರೈಸಲೆಂದೇ ವೈಕುಂಠವನ್ನು ಬಿಟ್ಟು ಭೂಮಿಯಲ್ಲಿ ಬಂದು ನೆಲೆಸಿಹನು. ಸೌಭಾಗ್ಯದ ಗಣಿಯಾದ, ಕಸ್ತೂರಿ ತಿಲಕವನಿಟ್ಟಿರುವ ಚೆಲುವನಾದ ಈತನನ್ನು ಪರಾಕ್ರಮದಲ್ಲಿ ಮೀರಿಸವವರಿಲ್ಲ.
ಸಕಲ ಸಂಪತ್ತಿಗೆ ಒಡೆಯನಾದ ಈತನ ಗುಣವಿಶೇಷಗಳನ್ನು ಲೋಕದಲ್ಲಿ ಹೊಗಳದಿರುವವರು ಕೆಟ್ಟಮನಸ್ಸಿನವರೇ ಹೊರತು ಶುದ್ಧಹೃದಯಿಗಳಲ್ಲ.
ಕೃಷ್ಣಾವತಾರದಲ್ಲಿ ಮಲ್ಲರ ಸೆದೆಬಡಿದು, ಸೋದರಮಾವನ ಕೊಂದು, ಅರ್ಜುನನ ಸಖನಾದ ಈತನು, ಎಲ್ಲರಿಗೂ ಯಾವಾಗಲೂ ಸಿಗುವವನಲ್ಲ (ಭಕ್ತಿಯಿಂದ ಮಾತ್ರ ಸಿಗುವವನು). ಇವನು ಪಾಪರಹಿತನು ಹಾಗು ತನ್ನ ಹೃದಯದಲ್ಲಿ ಸಕಲ ಮಂಗಳಕರ ದ್ರವ್ಯಗಳನ್ನು ಭಕ್ತರಿಗೆಂದೇ ಇರಿಸಿರುವನು. ಇಂತಹ, ನಮ್ಮೆದುರು ಬಂದುನಿಂತಿರುವ ಶ್ರೀಹರಿಯನ್ನು ಪದೇಪದೇ ಸಂತೋಷದಿಂದ ಭಜಿಸೋಣ, ಬೇಗ ಬನ್ನಿ.
ನುಡಿ ೩: ಕೌಸ್ತುಭ ಮಣಿ, ಪದಕ, ಕಡುಗ/ಬಳೆ, ಸರಗಳಿಂದ ಅಲಂಕೃತನಾದ ಈತನ ದರ್ಶನದಿಂದ ಉಲ್ಲಾಸವಾಗುವುದು. ತಪಸ್ವಿಗಳ ಏಕಾಗ್ರ ಭಾವದಂತೆ ಗಂಭೀರ ಮನಸ್ಸಿನ ಈತನು ಭಕ್ತರಿಗೆ ಬಹು ಉದಾರಿಯು.
ಬ್ರಹ್ಮ-ಶಿವ-ಮೊದಲಾದ ದೇವತೆಗಳ ಸಲಹುವನು, ಸಕಲರಿಗೂ ಸಕಲವನ್ನೂ ಕೊಡುವವನು, ಆದಿ-ಅಂತ್ಯಗಳಿಲ್ಲದವನು, ಸೃಷ್ಠಿ ಮೊದಲಾದವುಗಳ ಕಾರಣನಾದ ಈತ, ಪ್ರತಿವರ್ಷ ಬ್ರಹೋತ್ಸವದಲ್ಲಿ ಸ್ವಾಮಿತೀರ್ಥದ ಸನ್ನಿಧಿಯಲ್ಲಿ ಶ್ರೀ-ಭೂದೇವಿಯರೊಡನೆ ತನ್ನ ಮಹಿಮೆಯಿಂದ ಮೆರೆಯುವನು. ಇಂತಹ ಶ್ರೀನಿವಾಸನನ್ನು ಭಜಿಸೋಣ.