ಶುಕ್ರವಾರ, ನವೆಂಬರ್ 24, 2017

ArigAdarU pUrva kalpane tappado - kanakadAsaru

ಆರಿಗಾದರೂ ಪೂರ್ವ ಕಲ್ಪನೆ ತಪ್ಪದೊ - ಕನಕದಾಸರು 

ಈ ಪದವನ್ನು ನೀಲಾಂಬರಿ ರಾಗದಲ್ಲಿ ಇಲ್ಲಿ ಕೇಳಿ


।। ಆರಿಗಾದರೂ ಪೂರ್ವ ಕಲ್ಪನೆ ತಪ್ಪದೊ । ಬೇರೆ ಬಯಸಿದರೆ ಬರಲರಿಯದಯ್ಯ ।।ಪ।।

।। ರಾಮಚಂದ್ರನ ಸೇವೆ ಮಾಡಿಮೆಚ್ಚಿಸಿ ಮಹಾ- । ತಾಮಸನ ಗರ್ವವನು ಮುರಿದು ಬಂದ ।।
।। ರೋಮ ಕೋಟಿ ಲಿಂಗವೆನಿಸಿದಾ ಹನುಮನಿಗೆ । ಗ್ರಾಮಗಳ ಕಾಯ್ದುಕೊಂಡಿರುವ ಮನೆಯಾಯ್ತೋ ।।೧।।

।। ಸುರಪತಿಯ ಗೆದ್ದು ಸುಧೆಯ ತಂದು ಮಾತೆಯ । ಸೆರೆಯನು ಪರಿಹರಿಸಿ ಬಹುಭಕ್ತನೆನಿಸಿ ।।
।। ಹರಿಗೆ ವಾಹನಾಗಿ ಹದಿನಾಲ್ಕು ಲೋಕವನು । ಚರಿಸಿದಾ ಗರುಡನಿಗೆ ಮನೆ ಮರದ ಮೇಲಾಯ್ತೋ ।।೨।।

।। ಪೊಡವಿ ಭಾರವ ಹೊತ್ತು ಮೃಡಗೆ ಭೂಷಣನಾಗಿ । ಹೆಡೆಯೊಳಗೆ ಮಾಣಿಕ್ಯವಿಟ್ಟುಕೊಂಡು ।।
।। ಬಿಡದೆ ಶ್ರೀಹರಿಗೆ ಹಾಸಿಗೆಯಾದ ಫಣಿಪತಿಗೆ । ಅಡವಿಯೊಳಗಣ ಹುತ್ತ ಮನೆಯಾಯಿತಯ್ಯ ।।೩।।

।। ಮೂರುಲೋಕದ ಒಡೆಯ ಮುಕ್ಕಣ್ಣನೆಂಬಾತ । ಸಾರುತಿದೆ ಸಟೆಯಲ್ಲ ವೇದವಾಕ್ಯ ।।
।। ಪಾರ್ವತೀಪತಿಯಾದ ಕೈಲಾಸದೊಡೆಯನಿಗೆ । ಊರ ಹೊರಗಣ ಮಸಣ ಮನೆಯಾಯಿತಯ್ಯ ।।೪।।

।। ಮೀರಲಳವಲ್ಲವೋ ಮುನ್ನ ಮಾಡಿದ್ದು । ಆರು ಪರಿಹರಿಸಿಕೊಂಬುವರಿಲ್ಲವೋ ।।
।। ಮಾರಪಿತ ಕಾಗಿನೆಲೆಯಾದಿಕೇಶವರಾಯ । ಕಾರಣಕೆ ಕರ್ತನೀಕಡೆ ಹಾಯಿಸಯ್ಯ ।।೫।।

ಸರಳ ಕನ್ನಡದಲ್ಲಿ ಕೃತಿಯ ಅರ್ಥ 

ಕನಕದಾಸರು 'ಹಣೆಯ ಬರಹವನ್ನು ಯಾರೂ ತಿದ್ದಲಾರರು' ಎಂದಿದ್ದಾರೆ ಈ ಪದದಲ್ಲಿ. ಇದಕ್ಕೆ ನಾಲ್ಕು ಪೌರಾಣಿಕ ನಿದರ್ಶನಗಳನ್ನು ನಾಲ್ಕು ನುಡಿಗಳಲ್ಲಿ ನೀಡಿದ್ದಾರೆ. 
ಪಲ್ಲವಿ: ಪೂರ್ವ ಕಲ್ಪನೆ ಅಥವಾ ವಿಧಿಯನ್ನು ತಪ್ಪಿಸಿಕೊಳ್ಳಲು ಆಗದು. ಬೇರೆ ಏನನ್ನೋ ಬಯಸಿದರೆ ಅದು ಸಾಧ್ಯವಾಗಲಾರದು. 
ನುಡಿ ೧: ಹನುಮಂತನ ಉದಾಹರಣೆ - ಶ್ರೀರಾಮನ ಸೇವೆಮಾಡಿ, ರಾವಣಸೈನ್ಯವನ್ನು ಮೆಟ್ಟಿ, ರೋಮರೋಮಕ್ಕೆ ಕೋಟಿ ಲಿಂಗವನ್ನು ಸೃಷ್ಟಿಸಿದ ಹನುಮಂತ ಪ್ರತಿ ಗ್ರಾಮದ ಹೊರಗಿನ ಗುಡಿಯಲ್ಲಿ ಕೂತು ಗ್ರಾಮವನ್ನು ಕಾಯುವವನಾಗಿದ್ದಾನೆ. ಎಷ್ಟೇ ಮಹಿಮಾನ್ವಿತನಾದರೂ ಹನುಮಂತನು ಐಶ್ವರ್ಯ-ಭೋಗಗಳನ್ನು ಬಿಟ್ಟು ಗ್ರಾಮದ ಹೊರಗಿನ ಗುಡಿಯಲ್ಲಿ ವಿಧಿನಿಶ್ಚಿತ ಕರ್ಮವಾದ ಗ್ರಾಮರಕ್ಷಣೆ ಮಾಡುತ್ತಿರುವನು.
ನುಡಿ ೨: ಗರುಡನ ಉದಾಹರಣೆ - ತಾಯಿ ವಿನತೆ ಮಲತಾಯಿ ಕದ್ರುವಿನ ಮೋಸದ ಸ್ಪರ್ಧೆಯಲ್ಲಿ ಸೋತು ದಾಸಿಯಾಗಿ ಸೆರೆಯಲ್ಲಿ ಸಿಕ್ಕಿದಾಗ, ವಿನತೆಯ ಸೆರೆ ಬಿಡಿಸಲು ಮಗನಾದ ಗರುಡನು ದೇವತೆಗಳನ್ನು ಯುದ್ಧದಲ್ಲಿ ಗೆದ್ದು, ಇಂದ್ರನನ್ನು ಒಲಿಸಿ, ಅಮೃತವನ್ನು ತಂದು ಕದ್ರುವಿನ ಮಕ್ಕಳಾದ ಸರ್ಪಗಳಿಗೆ ಕೊಟ್ಟನು. ಇದರಿಂದ ವಿನತೆಯು ಮುಕ್ತಳಾದಳು. ಅನಂತರ ಶ್ರೀಹರಿಗೆ ವಾಹನನಾಗಿ ಸಕಲ ಲೋಕಗಳಲ್ಲಿ ಓಡಾಡುವನಾದ ಗರುಡ. ಇಂತಹ ಮಹಿಮಾವಂತನಾದರೂ ಗರುಡನ ಮನೆಯು ಮರದ ಮೇಲಿನ ಒಂದು ಗೂಡು ಅಷ್ಟೇ!
ನುಡಿ ೩: ನಾಗರಾಜನ ಉದಾಹರಣೆ - ಹಾವುಗಳ ಒಡೆಯನಾದ ನಾಗರಾಜ ತನ್ನ ಹೆಡೆಯ ಮೇಲೆ ಇಡೀ ಜಗತ್ತನ್ನೇ ಎತ್ತಿ ಹಿಡಿದಿರುವನು. ಶಿವನ ಕೊರಳನ್ನು ಅಲಂಕರಿಸಿರುವನು. ತನ್ನ ಹೆಡೆಯಲ್ಲಿ ನಾಗಮಣಿ ಧರಿಸಿರುವನು. ಹಾಗೂ ಶ್ರೀಹರಿಗೆ ಹಾಸಿಗೆಯಾಗಿ ಸೇವೆ ಮಾಡುತ್ತಿರುವನು. ಇಂತಹ ಮಹಿಮಾವಂತನಾದರೂ ನಾಗರಾಜನ ಮನೆ ಕಾಡಿನಲ್ಲಿನ ಒಂದು ಹುತ್ತ ಅಷ್ಟೇ!
ನುಡಿ ೪: ಶಿವನ ಉದಾಹರಣೆ - ಮೂರು ಲೋಕಗಳ ಒಡೆಯನೆಂದು ಪ್ರಸಿದ್ಧನಾದ, ಪಾರ್ವತೀಪತಿಯಾದ, ಮೂರುಕಣ್ಣುಳ್ಳ ಶಿವನ ಮನೆ ಊರ ಹೊರಗಿನ ಸ್ಮಶಾನ ಅಷ್ಟೇ ಎಂದು ವೇದಗಳೇ ಸಾರುತ್ತಿವೆ!
ನುಡಿ ೫: ಎಂತಹ ಮಹಿಮಾವಂತನಾದರೂ ಪೂರ್ವಕರ್ಮ ಫಲವನ್ನು ಬದಲಾಯಿಸಲಾಗದು. ಈ ಜಗತ್ತಲ್ಲಿ ಯಾರೂ ತಿದ್ದಿದವರಿಲ್ಲ. ಎಲ್ಲರ ವಿಧಿಯನ್ನು ನಿರ್ಧರಿಸುವ ಶ್ರೀಹರಿಯೇ, ನಿನ್ನ ಕೃಪಾದೃಷ್ಟಿಯನ್ನು ಬೀರು. 

ಬುಧವಾರ, ನವೆಂಬರ್ 22, 2017

chintyake maDuti - muddu viTThala

ಚಿಂತ್ಯಾಕೆ ಮಾಡುತಿ ಚಿನ್ಮಯನಿದ್ದಾನೆ - ಮುದ್ದುವಿಠ್ಠಲರ ರಚನೆ 

ಎಚ್. ಕೆ. ನಾರಾಯಣ ಮತ್ತು ಸಂಗಡಿಗರ ಧ್ವನಿಯಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ಚಿಂತ್ಯಾಕೆ ಮಾಡುತಿ ಚಿನ್ಮಯನಿದ್ದಾನೆ । ಚಿಂತಾರತ್ನವೆಂಬೋ ಅನಂತನಿದ್ದಾನೆ ।।ಪ।।

।। ಎಳ್ಳುಮೊನೆಯ ಮುಳ್ಳುಕೊನೆಯ । ಪೊಳ್ಳು ಬಿಡದೆ ಒಳಗೆ ಹೊರಗೆ ।
ಎಲ್ಲಾ ಠಾವಿನಲ್ಲಿ ಲಕುಮಿ । ನಲ್ಲನಿದ್ದಾನೆ ಪ್ರಾಣಿ ।।೧।।

।। ಗೋಪ್ತ ತ್ರಿಜಗವ್ಯಾಪ್ತ ಭಜಕರ । ಆಪ್ತನೆನಿಸಿ ಕಂಭದಲ್ಲಿ ।
ಪ್ರಾಪ್ತನಾದ ಪ್ರಹ್ಲಾದನ ಪರ- । ಮಾಪ್ತನಿದ್ದಾನೆ ಪ್ರಾಣಿ ।।೨।।

।। ಹಿಂದೆ ನಿನ್ನ ಸಲಹಿದರಾರು । ಮುಂದೆ ನಿನ್ನ ಕೊಲ್ಲುವರಾರು ।
ಎಂದಿಗಂದಿಗಿಂದಿಗೂ ಗೋ- । ವಿಂದನಿದ್ದಾನೆ ಪ್ರಾಣಿ ।।೩।।

।। ಮುಕ್ಕಣ್ಣ ದೇವರ್ಗಳಿಗೆ । ಸಕ್ಕದಿರುವ ಕಿರಿಯವರಿಯ ।
ಚಿಕ್ಕವರಿಗೆ ಅಜರ ಪದವಿಯ । ದಕ್ಕಿಸಿದ್ದಾನೆ ಪ್ರಾಣಿ ।।೪।।

।। ಬಲ್ಲಿದ ಭಜಕರ ಹೃದಯ- । ದಲ್ಲಿ ನಿಂತು ಮುದ್ದುವಿಠ್ಠಲ
ಸೊಲ್ಲುಸೊಲ್ಲಿಗವರ ಬಯಕೆ । ಸಲ್ಲಿಸುತಿದ್ದಾನೆ ಪ್ರಾಣಿ ।।೫।।

ಸರಳ ಕನ್ನಡದಲ್ಲಿ ಕೃತಿಯ ಅರ್ಥ 

ಸ್ಮರಣೆಯಿಂದ ಚಿಂತೆ ಎಲ್ಲವ ಕಳೆವನು ಹರಿ ಎಂಬ ಸರಳ ತತ್ವವನ್ನು ಪ್ರಾಸಗಳಿಂದ ಪೋಣಿಸಿದ ಈ ಪದದಲ್ಲಿ ತಿಳಿಸಿದ್ದಾರೆ  ದಾಸರು. ಹರಿಯ ಧ್ಯಾನದ ಹೊರತು ಚಿಂತೆಗಳೆಲ್ಲ ವ್ಯರ್ಥ. ಆದ್ದರಿಂದ, ಓ ಪ್ರಾಣಿ! ಹರಿ ಧ್ಯಾನ ಮಾಡು ಎಂದಿದ್ದಾರೆ.
ನುಡಿ ೧: ನಮ್ಮನ್ನು ಸಲಹಲು ಸಕಲ ಸ್ಥಳಗಳಲ್ಲಿಯೂ ಇರುವನು ಹರಿ. ಎಳ್ಳಿನ ತುದಿಯಲ್ಲೂ, ಮುಳ್ಳಿನ ಚೂಪಾದ ತುದಿಯಲ್ಲೂ, ಸ್ವಲ್ಪವೂ ಪೊಳ್ಳು/ಖಾಲಿ ಬಿಡದೆ ಎಲ್ಲೆಡೆ ಆವರಿಸಿರುವನು ಲಕ್ಷ್ಮಿಯ ಪ್ರಿಯಕರ.
ನುಡಿ ೨: ಕಣ್ಣಿಗೆ ಕಾಣಿಸದ ಸೂಕ್ಷ್ಮ ಬಗೆಯಲ್ಲಿ ಜಗವೆಲ್ಲ ತುಂಬಿ, ಪ್ರಹ್ಲಾದನ ಕಷ್ಟಕಾಲದಲ್ಲಿ ಕಂಭದಲ್ಲಿ ಕಾಣಿಸಿಕೊಂಡಂತೆ ಭಕ್ತರಿಗೆ ಕಾಣಿಸಿಕೊಳ್ಳುವನು ಹರಿ.
ನುಡಿ ೩: ನಮಗೆ ಕಾಲಕಾಲಕ್ಕೆ ಜೀವನ-ಮರಣಗಳನ್ನು ಕೊಟ್ಟು, ಸದಾ ಕಾಯ್ದು ಸಲಹುವವನು ಗೋವಿಂದನಾದ ಹರಿ. 
ನುಡಿ ೪: ಶಿವ ಮೊದಲಾದ ದೇವರುಗಳನ್ನು ಜಗತ್ತನು ನಡೆಸುವ ಕಾರ್ಯದಲ್ಲಿ ತೊಡಗಿಸಿ, ಅವರಿಗೆ ಶಾಶ್ವತ ಪದವಿ ಕೊಟ್ಟು ನಡೆಸುವವನು ಹರಿ.
ನುಡಿ ೫: ತನ್ನನ್ನು ಅರಿತ ಭಕ್ತರ ಹೃದಯದಲ್ಲಿ ನಿಂತು, ಅವರು ಮಾತುಮಾತಿಗೆ ಬಯಸಿದ (ಮನಸ್ಸಿಗೆ ಬಂದ) ಭಾಗ್ಯಗಳನ್ನೆಲ್ಲಾ ಕೊಟ್ಟು ಪೊರೆಯುವವನು ಹರಿ. 

nAma sankeertane - purandaradAsaru

ನಾಮ ಸಂಕೀರ್ತನೆ - ಪುರಂದರದಾಸರ ಕೃತಿ 

ಧನ್ಯಾಸಿ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ನಾಮ ಸಂಕೀರ್ತನೆ ಅನುದಿನ ಮಾಳ್ಪಗೆ । ನರಕ ಭಯಗಳುಂಟೇ? ।।ಪ।।
।। ನಾಮವೊಂದೇ ಯಮನಾಳ್ಗಳನೊದೆದು । ಅಜಾಮಿಳಗೆ ಸುಕ್ಷೇಮವಿತ್ತ ಹರಿ- ।।ಅ. ಪ।।

।। ಕೇಸರಿಗಂಜದ ಮೃಗವುಂಟೇ । ದಿನೇಶನಿಗಂಜದ ತಮವುಂಟೇ ।।
।। ವಾಸುದೇವ ವೈಕುಂಠ ಜಗನ್ಮಯ । ಕೇಶವ ಕೃಷ್ಣ ಎಂದುದ್ಧರಿಸುವ ।।೧।।

।। ಗರುಡನಿಗಂಜದ ಫಣಿಯುಂಟೇ ಬಲು । ಪ್ರಳಯಕಾಲದಿ ಜೀವಿಪರುಂಟೇ ।।
।। ನರಹರಿ ನಾರಾಯಣ ದಾಮೋದರ । ಪರಮಪುರುಷ ಪುರಂದರವಿಠ್ಠಲ ಎಂಬೋ ।।೨।।

ಸರಳ ಕನ್ನಡದಲ್ಲಿ ಕೃತಿಯ ಅರ್ಥ

ಹರಿನಾಮ ಸ್ಮರಣೆಯ ಮಹಿಮೆಯನ್ನು ದೃಷ್ಟಾಂತ-ರೂಪಕಗಳಿಂದ ಪುರಂದರದಾಸರು ಬಣ್ಣಿಸಿಹರು. 
ಪಲ್ಲವಿ: ನಿತ್ಯ ಹರಿನಾಮ ಸ್ಮರಣೆ ಮಾಡುವವನಿಗೆ ನರಕದ ಭಯವಿಲ್ಲ. 
ಅನುಪಲ್ಲವಿ: ದೃಷ್ಟಾಂತವಾಗಿ ಅಜಾಮಿಳನ ಕಥೆಯನ್ನು ಉಲ್ಲೇಖಿಸಿದ್ದಾರೆ - ಹರಿನಾಮ ಸ್ಮರಣೆಯೊಂದರಿಂದ ನರಕ ತಪ್ಪಿಸಿಕೊಂಡ ಅಜಾಮಿಳನಂತೆ. ಭಾಗವತ ಪುರಾಣದಲ್ಲಿ ಅಜಾಮಿಳನ ಕಥೆಯು ವಿವರಿಸಿದ್ದು, ಅಜಾಮಿಳನು ಧರ್ಮಭ್ರಷ್ಟನಾದರೂ ತನ್ನ ಕೊನೆಗಾಲದಲ್ಲಿ ತನ್ನ ಮಗನ ಹೆಸರಾದ ನಾರಾಯಣ ಎಂದು ಕೂಗಲು, ಆತನ ಪಾಪಗಳೆಲ್ಲ ನಾಶವಾಗಿ ನರಕದಿಂದ ಪಾರಾದ.
ನುಡಿ ೧: ಹೇಗೆ ಸಿಂಹಕ್ಕೆ ಹೆದರದ ಪ್ರಾಣಿಯಿಲ್ಲವೋ, ಹೇಗೆ ಸೂರ್ಯನಿಗೆ ಹೆದರದ ಕತ್ತಲೆ ಇಲ್ಲವೋ, ಹಾಗೆಯೇ ಹರಿಯ ನಾಮಸ್ಮರಣೆಗೆ ಹೆದರದ ನರಕ ಇಲ್ಲ. 
ನುಡಿ ೨: ಹೇಗೆ ಗರುಡನಿಗೆ ಹೆದರದ ಹಾವಿಲ್ಲವೋ, ಹೇಗೆ ಪ್ರಳಯ ಎಲ್ಲವನ್ನೂ ನಾಶ ಮಾಡುವುದೋ, ಹಾಗೆಯೇ ಹರಿ ನಾಮ ಸ್ಮರಣೆ ಪಾಪಗಳೆಲ್ಲವ ನಾಶ ಮಾಡಿ ನರಕದಿಂದ ತಪ್ಪಿಸುವುದು. 



koDuvavanu neenu - vijayadAsaru

ಕೊಡುವವನು ನೀನು - ವಿಜಯದಾಸರ ಕೃತಿ 

ಈ ಪದವನ್ನು ಬೃಂದಾವನಿ ಸಾರಂಗ ರಾಗದಲ್ಲಿ ಇಲ್ಲಿ ಕೇಳಿ


|| ಕೊಡುವವನು ನೀನು ಕೊಂಬುವನು ನಾನು |
ಬಡ ಮನದ ಮನುಜನ ಬೇಡಿ ಫಲವೇನು? ।।ಪ||

|| ಹದಿನಾರು ಹಲ್ಲುಗಳ ಬಾಯ್ದೆರೆದು ಬೇಡಿದರೆ
ಇದು ಸಮಯವಲ್ಲೆಂದು ಪೇಳಿ ತಾನು |
ಮದನ ಕೇಳಿಗೆ ನೂರನೊಂದಾಗಿ ನೋಡುವನು
ಮದಡ ಮಾನವನೇನು ಕೊಡಬಲ್ಲ ಹರಿಯೇ? ||೧||

|| ಹೀನ ವೃತ್ತಿಯ ಜನರಿಗಾಸೆಯನು ಬಡುವುದು
ಗಾಣದೆತ್ತು ತಿರುಗಿ ಬಳಲಿದಂತೆ |
ಭಾನುಕೋಟಿತೇಜ ವಿಜಯವಿಠ್ಠಲರಾಯ
ನೀನಲ್ಲದನ್ಯತ್ರ ಕೊಡುಕೊಂಬರುಂಟೇ? ||೨||

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ

ವಿಜಯದಾಸರು ವಿಡಂಬನೆಯ ಮೂಲಕ ಮಾನವನ ಅಲ್ಪತೆಯನ್ನು, ಭಗವಂತನ ಅನಂತತೆಯನ್ನು ಬಣ್ಣಿಸಿದ್ದಾರೆ.
ಪಲ್ಲವಿಯಲ್ಲಿ ದಾಸರು ಭಗವಂತನೇ ನಮಗೆ ಸಕಲ ಭಾಗ್ಯ-ಭೋಗ್ಯಗಳನ್ನು ಕೊಡುವವನು, ನಾವು ಅವುಗಳನ್ನು ಪಡೆಯುವವರು ಅಷ್ಟೇ ಎಂದು ಹೇಳಿದ್ದಾರೆ. ಅಲ್ಲದೆ, ಮಾನವನು ತಾನು ದಾನ-ಧರ್ಮಾದಿಗಳಿಂದ ಇತರರಿಗೆ ಕೊಡುವನು, ಒಳಿತು ಮಾಡುವನು ಎಂದು ತಿಳಿದಿರುವುದು ಬರಿಯ ಭ್ರಮೆಯೇ. ಹಾಗಾಗಿ ಅಂತಹ ಅಲ್ಪ ಮಾನವನ ಬೇಡಿ ಏನೂ ಪ್ರಯೋಜನವಾಗಲಾರದು ಎಂದಿದ್ದಾರೆ.
ನುಡಿ ೧: ಒಮ್ಮೆ ಶಕ್ತಿ ಹಿಂಗಿದ ಕಾಲದಲ್ಲಿ ಅಥವಾ ಕಷ್ಟದ ಕಾಲದಲ್ಲಿ ಹರಿಯನ್ನು ಬೇಡಲು, ಅವನು ಸಹಾಯ ಮಾಡಲು ನಿರಾಕರಿಸಿದನು. ಆದರೆ, ಸರಿಯಾದ ಸಮಯ ಬಂದಾಗ, ನಾನು ನೂರು (ಹೆಚ್ಚು) ವರಗಳನ್ನು ಬೇಡಿದರೂ, ಹರಿಯು ಅವೆಲ್ಲವೂ ಕೇವಲ ಒಂದೇ ವಾರವೇನೋ (ಇವೇನು ಹೆಚ್ಚಲ್ಲ) ಎಂಬಂತೆ ಸಕಲವನ್ನೂ ಕರುಣಿಸುವನು. ಅಲ್ಪನಾದ ಮಾನವ ಹೀಗೆ ಕೃಪೆ ಮಾಡಲು ಸಾಧ್ಯವೇ? ಸಾಧ್ಯವಿಲ್ಲ.
ನುಡಿ ೨: ಸಂಕುಚಿತ ಮನೋಭಾವದ, ಫಲಾಪೇಕ್ಷೆ ಹೊಂದಿರುವ ಜನರಿಗೆ ಸೇವೆ ಮಾಡುವುದು ವ್ಯರ್ಥ. ಗಾಣದಲ್ಲಿ ಎತ್ತು ಹೇಗೆ ಸುತ್ತಿ ಸುತ್ತಿ, ಎಲ್ಲೂ ಹೋಗಲಾರದೆ, ಅಲ್ಲೇ ಸಿಕ್ಕಿ ಒದ್ದಾಡುತ್ತದೆಯೋ ಹಾಗೆಯೇ ಕೂಲಿಗಾಗಿ ಬೇರೆಯವರ ಸೇವೆ ಮಾಡುವುದು. ಹಾಗಾಗಿ, ವ್ಯರ್ಥ ಯತ್ನವನ್ನು ಬಿಟ್ಟು, ಕೋಟಿ ಸೂರ್ಯರ ಕಾಂತಿಯವನಾದ ಶ್ರೀಹರಿಯ ಸೇವೆಯನ್ನು ಮಾಡೋಣ. ಹರಿಯಲ್ಲದೆ ಇನ್ನಾರೂ ಸಲಹುವವರಿಲ್ಲ.