ಗುರುವಾರ, ಏಪ್ರಿಲ್ 19, 2018

sharaNu shree guru rAghavEndrage - jagannAthadAsaru

ಶರಣು ಶ್ರೀಗುರುರಾಘವೇಂದ್ರಗೆ - ಜಗನ್ನಾಥದಾಸರು 

ಭೀಂಪಲಾಸ್ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ಶರಣು ಶ್ರೀಗುರುರಾಘವೇಂದ್ರಗೆ । ಶರಣು ಯತಿಕುಲ ತಿಲಕಗೆ ।।ಪ।।
।। ಶರಣು ಶರಣರ ಪೊರೆವ ಕರುಣಿಗೆ । ಶರಣು ಹರಿಗುಣಲೋಲಗೆ ।।ಅ.ಪ.।।

।। ನಿತ್ಯ ನಿರ್ಮಲ ಪುಣ್ಯಗಾತ್ರಗೆ । ಭೃತ್ಯಪಾಲಕ ಸುಗುಣಪಾತ್ರಗೆ ।।
।। ಸತ್ಯ ಜ್ಞಾನ ಸುಮೋದ ನೇತ್ರಗೆ । ಸ್ತುತ್ಯ ಯತಿವರ ಸುಗುಣಮಿತ್ರಗೆ ।।೧।।

।। ಮೋದದಾಯಕ ಭೇದಸಾಧಕ । ಮೇದಿನೀಸುರಜಾಲ ನಾಯಕ ।।
।। ಮೋದತೀರ್ಥರ ಚರಣಸೇವಕ । ಆದಿಗುರು ಜಗನ್ನಾಥವಿಠ್ಠಲ ದೂತಗೆ ।।೨।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ 

ಮಂತ್ರಾಲಯ ಪ್ರಭುಗಳಾದ ಗುರುರಾಯರೆಂದೆನಿಸಿದ ರಾಘವೇಂದ್ರ ಸ್ವಾಮಿಗಳ ಸ್ತುತಿ ಮಾಡಿದ್ದಾರೆ ಜಗನ್ನಾಥದಾಸರು. 
ಪಲ್ಲವಿ:  ರಾಘವೇಂದ್ರ ಸ್ವಾಮಿಗಳಿಗೆ, ಯತಿಗಳಲ್ಲಿ ಮುಖ್ಯರೆಂದೆನಿಸದವರಿಗೆ ಶರಣು. 
ಅನುಪಲ್ಲವಿ: ಶರಣಾಗತರ ವಾ ಭಕ್ತರ ಸಲಹುವ, ಶ್ರೀಹರಿಯ ಗುಣಗಳ ಸದಾ ಸ್ತುತಿಸುವ ರಾಯರಿಗೆ ಶರಣು. 
ನುಡಿ ೧: ಸದಾ ಶುಭ್ರಚರಿತರಾದ, ಪುಣ್ಯವಂತರಾದ, ಸೇವಕರ ಸಲಹುವ, ಸದ್ಗುಣವಂತರಾದ, ಸತ್ಯ-ಜ್ಞಾನ-ಆನಂದಗಳೆಂಬ ತತ್ವದ ಅನುಭಾವಿಗಳಾದ, ಸ್ತುತಿಗೆ ಪಾತ್ರರಾದ,  ಸನ್ಯಾಸಿಗಳಲ್ಲಿ ಶ್ರೇಷ್ಠರಾದ ರಾಯರಿಗೆ ಶರಣು. 
ನುಡಿ ೨: ಭಕ್ತರಿಗೆ ಆನಂದವನ್ನು ಕೊಡುವ, ಪಂಚಭೇದ ತತ್ವವನ್ನು ಸಾಧಿಸಿದ, ಸುಜ್ಞಾನಿಗಳ ನಾಯಕನಾದ, ಮಧ್ವಾಚಾರ್ಯರ ಸೇವಿಸುವ ಶಿಷ್ಯನಾದ, ಶ್ರೀಹರಿಯ ದೂತನಾದ ರಾಯರಿಗೆ ಶರಣು. 

eesa bEku iddu jayisa bEku - purandaradAsaru

ಈಸ ಬೇಕು ಇದ್ದು ಜಯಿಸಬೇಕು - ಪುರಂದರದಾಸರು

ಈ ಕೃತಿಯನ್ನು ಧನ್ಯಾಸಿ ರಾಗದಲ್ಲಿ ಇಲ್ಲಿ ಕೇಳಿ


।। ಈಸ ಬೇಕು ಇದ್ದು ಜಯಿಸಬೇಕು ।।ಪ।।
।। ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ।।ಅ.ಪ.।।

।। ತಾಮರಸ ಜಲದಂತೆ ಪ್ರೇಮವಿತ್ತು ಭವದೊಳು ।
ಸ್ವಾಮಿ ರಾಮನೆನುತ ಪಾಡಿ ಕಾಮಿತಕ್ಕೆ ಕೊಂಬೊರೆಲ್ಲ ।।೧।।

।। ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ ।
ಮೀರಿ ಆಸೆ ಮಾಡದ್ಹಾಂಗೆ ಧೀರ ಕೃಷ್ಣನ ನೆನೆವರೆಲ್ಲ ।।೨।।

।। ಮಾಂಸದಾಸೆಗೆ ಸಿಲುಕಿ ಮತ್ಸ್ಯ ಹಿಂಸೆಪಟ್ಟ ಪರಿಯಂತೆ ।
ಮೋಸಹೋಗದ್ಹಾಂಗೆ ಜಗದೀಶ ಪುರಂದರವಿಠ್ಠಲನೆನುತ ।।೩।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ

ಕರ್ಮಸಿದ್ಧಾಂತದ ಸಾರವನ್ನೆಲ್ಲಾ ಎರಡೇ ಸಾಲಿನಲ್ಲಿ ಅಡಗಿಸಿಟ್ಟಿರುವರು ಪುರಂದರದಾಸರು. ಈ ಸಂಸಾರದ ಅಥವಾ ನಮ್ಮ ಜೀವನದ ಸುಖದುಃಖಗಳ ಜಂಜಾಟದಲ್ಲಿ ಪ್ರತಿಫಲದ ಅಪೇಕ್ಷೆ ಇಲ್ಲದೆ ಕರ್ತವ್ಯಗಳನ್ನು ಮಾಡಬೇಕು, ಮಾಡಿ ಮುಕ್ತಿಯನ್ನು ಜಯಿಸಬೇಕು. 
ನುಡಿ ೧: ಹೇಗೆ ತಾವರೆಯ ಎಲೆಯ ಮೇಲಿರುವ ನೀರಿನ ಹನಿ ಅಂತದೆಯೇ ಇರುವುದೋ, ಹಾಗೆಯೇ ಈ ಜೀವನದಲ್ಲಿ ಇದ್ದೂ ಅದರ ಒಳಿತು-ಕೆಡಕುಗಳನ್ನು ಅಂಟಿಸಿಕೊಳ್ಳದಂತೆ, ಪ್ರತಿಯೊಂದು ಕೆಲಸವನ್ನೂ ಶ್ರೀಹರಿಯ ಕೆಲಸವೆಂದು ಭಾವಿಸಬೇಕು. 
ನುಡಿ ೨: ಗೇರುಹಣ್ಣಿನಲ್ಲಿ ಬೀಜವು ಹೇಗೆ ಹೊರಗೆ ಅಂಟಿರುವುದೋ, ಹಾಗೆಯೇ ಈ ಸಂಸಾರಕ್ಕೆ ಅಂಟಿಕೊಂಡಿದ್ದರೂ ಮನಸ್ಸನ್ನೆಲ್ಲ ಶ್ರೀಹರಿಯಲ್ಲಿ ಇಟ್ಟು, ಅತಿಯಾಸೆ ಮಾಡದೆ ಅಂದರೆ ಎಲ್ಲವೂ ಶ್ರೀಹರಿಯ ಕೃಪೆ ಎಂದು ಭಾವಿಸಿ ಬದುಕಬೇಕು. 
ನುಡಿ ೩: ಮೀನು ಹಿಡಿಯಲು ಗಾಳದ ತುದಿಯಲ್ಲಿ ಮಾಂಸವನ್ನು ಸಿಕ್ಕಿಸುವುದುಂಟು. ಆ ಮಾಂಸದ ತುಂಡುಗೆ ಆಸೆಪಟ್ಟು ಮೀನು ಹೇಗೆ ಗಾಳಕ್ಕೆ ಸಿಕ್ಕಿಬೀಳುತ್ತದೆಯೋ ಹಾಗೆಯೇ ನಾವು ಈ ಸಂಸಾರದ ಕ್ಷಣಿಕ ಸುಖಗಳಿಗೆ ಆಸೆಪಟ್ಟರೆ ಬವಣೆಪಡಬೇಕಾಗುವುದು. ಇದರಿಂದ ತಪ್ಪಿಸಿಕೊಳ್ಳಲು ಕೇವಲ ಕರ್ತವ್ಯಗಳನ್ನು ಮಾಡುತ್ತಾ ಅವುಗಳ ಫಲ-ಅಫಲಗಳ ಆಸೆಯನ್ನು ಬಿಟ್ಟು  ಶ್ರೀಹರಿಯ ಧ್ಯಾನ ಮಾಡಬೇಕು. 

ಶುಕ್ರವಾರ, ಏಪ್ರಿಲ್ 6, 2018

jo jo shree krishna - purandaradAsaru

ಜೋಜೋ ಶ್ರೀಕೃಷ್ಣ ಪರಮಾನಂದ - ಪುರಂದರದಾಸರು 

ಈ ಕೃತಿಯನ್ನು ಕುರಂಜಿ ರಾಗದಲ್ಲಿ ಇಲ್ಲಿ ಕೇಳಿ


।। ಜೋಜೋ ಶ್ರೀಕೃಷ್ಣ ಪರಮಾನಂದ ।
ಜೋಜೋ ಗೋಪಿಯ ಕಂದ ಮುಕುಂದ ।।ಪ।।

।। ಪಾಲಗಡಲದೊಳು  ಪವಡಿಸಿದವನೇ 
ಆಲದೆಲೆಯ ಮೇಲೆ ಮಲಗಿದ ಶಿಶುವೇ ।
। ಶ್ರೀಲತಾಂಗಿಯಳ ಚಿತ್ತದೊಲ್ಲಭನೇ 
ಬಾಲ ನಿನ್ನನು ಪಾಡಿ ತೂಗುವೆನಯ್ಯಾ ।।೧।।

।। ಹೊಳೆವಂಥ ರನ್ನದ ತೊಟ್ಟಿಲ ಮೇಲೆ 
ಥಳಥಳಿಸುವ ಗುಲಗಂಜಿ ಮಾಲೆ ।
। ಅಳದೆ ನೀ ಪಿಡಿದಾಡೆನ್ನಯ ಬಾಲ 
ನಳಿನನಾಭನೇ ನಿನ್ನ ಪಾಡಿ ತೂಗುವೆನು ।।೨।।

।। ಆರ ಕಂದ ನೀನಾರ ನಿಧಾನೀ 
ಯಾರ ರತುನವೋ ನೀನಾರ ಮಾಣಿಕವೋ ।
। ಸೇರಿತು ಎನಗೊಂದು ಚಿಂತಾಮಣಿಯೆಂದು 
ಪೋರ ನಿನ್ನನು ಪಾಡಿ ತೂಗುವೆನಯ್ಯಾ ।।೩।।

।। ಗುಣನಿಧಿಯೇ ನಿನ್ನನೆತ್ತಿಕೊಂಡರೆ 
ಮನೆಯ ಕೆಲಸವಾರು ಮಾಡುವರಯ್ಯಾ ।
। ಮನಕೆ ಸುಖನಿದ್ರೆಯ ತಂದುಕೊ ಬೇಗ 
ಫಣಿಶಯನನೇ ನಿನ್ನ ಪಾಡಿ ತೂಗುವೆನು ।।೪।।

।। ಅಂಡಜವಾಹನ ಅನಂತಮಹಿಮ 
ಪುಂಢರೀಕಾಕ್ಷ ಶ್ರೀ ಪರಮಪಾವನ್ನ ।
। ಹಿಂಡುದೈವರಗಂಡ ಉದ್ದಂಡನೇ 
ಪಾಂಡುರಂಗ ಶ್ರೀ ಪುರಂದರವಿಠ್ಠಲ ।।೫।।

bEga bAro - vAdirAjaru

ಬೇಗ ಬಾರೋ ವೇಲಾಪುರದ ಚೆನ್ನ - ವಾದಿರಾಜರು 

ಈ ಕೃತಿಯನ್ನು ಆನಂದಭೈರವಿ ರಾಗದಲ್ಲಿ ಇಲ್ಲಿ ಕೇಳಿ


।। ಬೇಗ ಬಾರೋ ಬೇಗ ಬಾರೋ । ವೇಲಾಪುರದ ಚೆನ್ನ ಬೇಗ ಬಾರೋ ।।ಪ।।
।। ಬೇಗ ಬಾರೋ ಬೇಗ ಬಾರೋ । ನೀಲಮೇಘವರ್ಣ ಬಾರೋ ।।ಅ.ಪ।।

।। ಇಂದಿರೆ ರಮಣ ಗೋವಿಂದ ಬೇಗ ಬಾರೋ ।
ನಂದನ ಕಂದ ಮುಕುಂದ ಬೇಗ ಬಾರೋ ।।೧।।

।। ಧೀರ ಉದಾರ ಗಂಭೀರ ಬೇಗ ಬಾರೋ ।
ಹಾರ ಲಂಕಾರ ರಘುವೀರ ಬೇಗ ಬಾರೋ ।।೨।।

।। ಋದ್ಧ ಅನಿರುದ್ಧ ಸುರಾಧಾ  ಬೇಗ ಬಾರೋ ।
ಹದ್ದನೇರಿದ ಪ್ರಸಿದ್ಧ ಬೇಗ ಬಾರೋ ।।೩।।

।। ರಂಗ ಉತ್ತುಂಗ ನರಸಿಂಗ ಬೇಗ ಬಾರೋ ।
ಕಂಗಳೆಸೆವ ಮೋಹನಾಂಗ ಬೇಗ ಬಾರೋ ।।೪।।

।। ಅಯ್ಯ ವಿಜಯ ಸಾಹಾಯ್ಯ ಬೇಗ ಬಾರೋ ।
ಜೀಯ ಫಣೀಶಯ್ಯಾ ಹಯವದನ ಬೇಗ ಬಾರೋ ।।೫।।


ಈ ಕೃತಿಯ ಸರಳ ಕನ್ನಡದಲ್ಲಿನ ಅರ್ಥ

ವಾದಿರಾಜ ಯತಿಗಳು ಶ್ರೀಹರಿಯನ್ನು ಬೇಗ ಬಾರೋ ಎಂದು ಬಗೆಬಗೆಯಾಗಿ ಕರೆಯುತ್ತಿರುವರು ಈ ಕೃತಿಯಲ್ಲಿ. ಬೇಲೂರು ಚೆನ್ನಕೇಶವನಾದ ನೀಲ ಮೋಡಗಳ ಬಣ್ಣದವನಾದ ಹರಿಯೇ ಬೇಗ ಬಾ ಎಂದು ಆದರಿಸಿದ್ದಾರೆ ಪಲ್ಲವಿಯಲ್ಲಿ.
ನುಡಿ ೧: ಇಂದಿರೆ ಅಥವಾ ಲಕ್ಷ್ಮಿಯ ಪ್ರಿಯನಾದ ಗೋವಿಂದನೇ, ನಂದಗೋಪನ ಕಂದನಾದ ಕೃಷ್ಣನೇ ಬೇಗ ಬಾರೋ.
ನುಡಿ ೨: ಧೈರ್ಯವಂತನೇ, ದಾನಶೀಲನೇ, ಗಂಭೀರ ಚರಿತನೇ, ಲಂಕೆಗೆ ಸಮುದ್ರ ದಾಟಿ ಹೋದವನಾದ ರಾಮನೇ ಬೇಗ ಬಾರೋ .
ನುಡಿ ೩: ಭಗವಂತನೇ, ಯಾರಿಂದಲೂ ಹಿಡಿಯಲಾರದವನೇ, ಎಲ್ಲವನ್ನೂ ಉಳ್ಳವನೇ, ಗರುಡವಾಹನನೆಂದು ಪ್ರಸಿದ್ಧನಾದ ಹರಿಯೇ ಬೇಗ ಬಾರೋ.
ನುಡಿ ೪: ರಂಗನಾಥನೇ, ಎಲ್ಲದಕ್ಕಿಂತ ಉತ್ತಮನಾದವನೇ, ನರಸಿಂಹಾವತಾರನೇ, ಕಣ್ಣುಗಳು ತುಂಬಿಕೊಳ್ಳಲು ಸಾಲದ ಚೆಲುವು ಉಳ್ಳವನೇ ಬೇಗ ಬಾರೋ.
ನುಡಿ ೫: ಎಲ್ಲರಿಗೂ ಹಿರಿಯನಾದವನೇ, ಅರ್ಜುನನ ಸಾರಥಿಯಾದವನೇ, ಎಲ್ಲರ ಒಡೆಯನೇ, ಹಾವಿನ ಮೇಲೆ ಮಲಗಿದವನೇ ಹರಿಯೇ ಬೇಗ ಬಾರೋ. 

ಶುಕ್ರವಾರ, ಮಾರ್ಚ್ 9, 2018

mADu sikkadalla - purandaradAsaru

ಮಾಡು ಸಿಕ್ಕದಲ್ಲ - ಪುರಂದರದಾಸರು 

ಮಾಯಮಾಳವಗೌಳ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ಮಾಡು ಸಿಕ್ಕದಲ್ಲಾ ಮಾಡಿನ । ಗೂಡು ಸಿಕ್ಕದಲ್ಲಾ ।।ಪ।।
।। ಜೋಡುಹೆಂಡಿರಂಜಿ ಓಡಿ ಹೋಗುವಾಗ । ಗೋಡೆ ಬಿದ್ದು ಬಯಲಾಯಿತಲ್ಲ ।।ಅ.ಪ।।

।। ಎಚ್ಚರಗೊಳಲಿಲ್ಲ ಮನವೇ । ಹುಚ್ಚನಾದೆನಲ್ಲಾ ।।
।। ಅಚ್ಚಿನೊಳಗೆ ಮೆಚ್ಚು । ಮೆಚ್ಚಿನೊಳಗೆ ಅಚ್ಚು ।।
।। ಕಿಚ್ಚೆದ್ದು ಹೋಯಿತಲ್ಲಾ । ಮಾಡು ಸಿಕ್ಕದಲ್ಲಾ ।।೧।।

।। ಮುಪ್ಪು ಬಂದಿತಲ್ಲಾ ತಪ್ಪದೆ । ಪಾಯಸ ಉಣಲಿಲ್ಲಾ ।।
।। ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ । ಧೊಪ್ಪನೆ ಬಿತ್ತಂತಾಯಿತಲ್ಲಾ ।।೨।।

।। ಯೋಗವು ಬಂತಲ್ಲಾ ಅದುಪರಿ- । ಭಾಗವಾಯಿತಲ್ಲಾ ।।
।। ಭೋಗಿಶಯನ ಶ್ರೀಪುರಂದರವಿಠ್ಠಲನ । ಆಗ ನೆನೆಯಲಿಲ್ಲಾ ।।೩।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ 

ವ್ಯರ್ಥವಾಗಿ ಕಳೆದ ಜೀವನದ ಬಗ್ಗೆ ಪಶ್ಚಾತ್ತಾಪಪಡುವ ಚಿಂತನೆಯನ್ನು ಗೂಢವಾಗಿ ಈ ಕೃತಿಯಲ್ಲಿ ವಿವರಿಸುವ ಮೂಲಕ ನಮ್ಮೆಲ್ಲರನ್ನು ಎಚ್ಚರಿಸಿದ್ದಾರೆ ಪುರಂದರದಾಸರು.
ಪಲ್ಲವಿ: ಉತ್ಕೃಷ್ಟ ವಸ್ತುಗಳನ್ನು ಇರಿಸುವ ಮಾಡದ ಗೂಡು ಸಿಕ್ಕದಾಯಿತಲ್ಲಾ. ಒಳಾರ್ಥವಾಗಿ ಬದುಕಿನ ಸಾರ್ಥಕ್ಯ, ಮುಕ್ತಿ ಸಾಧನ ಕೈಗೆ ಎಟುಕದಾಯಿತಲ್ಲಾ. ಇಬ್ಬರು ಹೆಂಡತಿಯರು ಎಂದರೆ ಹಗಲು-ರಾತ್ರಿಗಳು ಕಾಲದ ವೇಗಕ್ಕೆ ಹೆದರಿ ಓಡುವಾಗ, ಗೋಡೆ ಬಿದ್ದು ಎಂದರೆ ದೇಹವು ಶಿಥಿಲವಾಗಿ, ಬಯಲಾಯಿತಲ್ಲಾ ಎಂದರೆ ಎಲ್ಲಾ ಇಹ ಲೋಕದ ಸುಖಗಳು ಇಲ್ಲವಾಯಿತಲ್ಲಾ ಎಂದು.
ನುಡಿ ೧: ಎಚ್ಚರಗೊಳ್ಳದೆಯೇ ಮನಸ್ಸು ಈಗ ಹುಚ್ಚುಹಿಡಿದಂತಾಯಿತಲ್ಲಾ. ಅಚ್ಚು ಎಂದರೆ ಈ ದೇಹ. ಈ ದೇಹದಿಂದ ಸಿಗುವ ಸುಖವನ್ನೇ ಬಯಸಿ, ಆ ಬಯಕೆಗಳಲ್ಲಿ ಮನಸ್ಸನ್ನು ತೊಡಗಿಸಿ, ಕೊನೆಗೆ ಕಿಚ್ಚು ಹೋಯಿತಲ್ಲ ಎಂದರೆ ದೇಹದಾರ್ಢ್ಯ ಹೋಗಿ ಮುಪ್ಪಾಯಿತಲ್ಲಾ ಎಂದು.
ನುಡಿ ೨: ಮುಪ್ಪು ಬರುವಾ ಮುನ್ನಾ ಮುಕ್ತಿಸಾಧನೆ ಮಾಡಲಿಲ್ಲವಲ್ಲಾ. ಮಾನವಜನ್ಮ ಎಂಬ ತುಪ್ಪದ ಬಿಂದಿಗೆ ವ್ಯರ್ಥವಾಗಿ ತಿಪ್ಪೆಗೆ ಬಿದ್ದಂತೆ ಆಯಿತಲ್ಲಾ.
ನುಡಿ ೩: ಮಾನವಜನ್ಮದ ಮುಕ್ತಿಸಾಧನೆಗೆ ಯೋಗ್ಯವಾದ ಶರೀರ ಬಂದಿತ್ತು. ಆದರೆ ಅದರ ಸದುಪಯೋಗವಾಗದೆಯೇ ಈ ಶರೀರ ಶಿಥಿಲವಾಗಿದೆಯಲ್ಲಾ. ಗಟ್ಟಿ-ಮುಟ್ಟಾದ ಕಾಲದಲ್ಲಿ ಶ್ರೀಹರಿಯ ಧ್ಯಾನ ಮಾಡದೆಯೇ ವ್ಯರ್ಥವಾಗಿ ಕಾಲ ಕಳೆದೆನಲ್ಲಾ.

neere nee karetaare - purandaradAsaru

ನೀರೇ ನೀ ಕರಿತಾರೆ - ಪುರಂದರದಾಸರು

ದೇಶ್ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ನೀರೇ ನೀ ಕರಿತಾರೆ ಸುಂದರನ । ಮಾರಸುಂದರನ ಸುಕುಮಾರ ಶರೀರನ ।।ಪ।। 
।। ಗೊಲ್ಲರ ಮನೆಯೊಳಗೆ ಇದ್ದ ಪಾಲ್ಮೊಸರ । ಮೆಲ್ಲನೆ ಮೆಲ್ಲುವ ವಲ್ಲಭ ಹರಿಯ ।।೧।।
।। ಯಾದವರೆಲ್ಲರ ಆದರಿಸಿದನ ವೇದ- । ವೇದಾಂತನ ಯಾದವ ಪ್ರಿಯನ ।।೨।।
।। ವರಗೌರಿಪುರದಲ್ಲಿ ವಾಸವಾಗಿಹನ । ವರದ ಪುರಂದರವಿಠ್ಠಲ ರಾಯನ ।।೩।।

enagoo aaNe ranga - purandaradAsaru

ಎನಗೂ ಆಣೆ ರಂಗ ನಿನಗೂ ಆಣೆ - ಪುರಂದರದಾಸರು

ಈ ಕೃತಿಯನ್ನು ನೀಲಾಂಬರಿ ರಾಗದಲ್ಲಿ ಇಲ್ಲಿ ಕೇಳಿ


।। ಎನಗೂ ಆಣೆ ರಂಗ ನಿನಗೂ ಆಣೆ ।
ಎನಗೂ ನಿನಗೂ ಇಬ್ಬರಿಗೂ ನಿನ ಭಕ್ತರಾಣೆ ।।ಪ।।

।। ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ ।
ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ ।।೧।।

।। ತನುಮನಧನದಲಿ ವಂಚಕನಾದರೆ ಎನಗೆ ಆಣೆ ರಂಗ ।
ಮನಸು ನಿನ್ನಲಿ ನಿಲ್ಲಿಸದಿದ್ದರೆ ನಿನಗೆ ಆಣೆ ।।೨।।

।। ಕಾಕುಮನುಜರ ಸಂಗವ ಮಾಡಿದರೆನಗೆ ಆಣೆ ರಂಗ ।
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ ।।೩।।

।। ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ ।
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ।।೪।।

।। ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ।
ಪುರಂದರವಿಠಲ ನೀನೊಲಿಯದಿದ್ದರೆ ನಿನಿಗೆ ಆಣೆ ।।೫।।


ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ

ವರ್ತಕರು ತಮ್ಮ ವ್ಯಾಪಾರದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ, ಗೆಳೆಯರು ಆಟದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ, ದಾಸರು ಶ್ರೀಹರಿಯ ಜೊತೆ ಒಪ್ಪಂದದ ಮಾತನಾಡುತ್ತಿದ್ದಾರೆ ಈ ಕೃತಿಯಲ್ಲಿ. ಒಬ್ಬರಿನ್ನೊಬ್ಬರಿಗೆ ನಿಬಂಧ ಹಾಕಿಕೊಳ್ಳುವುದರಲ್ಲಿ ಪರಸ್ಪರ ಭಾವಾನುಬಂಧವು ಎದ್ದು ತೋರುತ್ತಿದೆ ಈ ದಾಸವಾಣಿಯಲ್ಲಿ. 
ಪಲ್ಲವಿ: ನನಗೊಂದು ನಿಬಂಧವಾದರೆ ನಿನಗೆ (ಶ್ರೀಹರಿಗೆ) ಮತ್ತೊಂದು ನಿಬಂಧ. ಮತ್ತು ನಮ್ಮಿಬ್ಬರಿಗೂ ನಮ್ಮ ಮಾತುಗಳನ್ನು ತಪ್ಪದಿರಲು  ಭಕ್ತರ ನಿಬಂಧನೆ.
ನುಡಿ ೧: ನಿನ್ನ ಬಿಟ್ಟು ಬೇರಾರನ್ನೂ ಭಜಿಸುವುದಿಲ್ಲ ಎಂಬುದು ನನ್ನ ನಿಬಂಧ/ಮಾತು. ಇದು ಸತ್ಯವಾಗಬೇಕಿದ್ದರೆ ನೀನು ನನ್ನ ಕೈಬಿಡುಬಾರದು.
ನುಡಿ ೨: ದೇಹಶಕ್ತಿ, ಮನಶ್ಶಕ್ತಿ, ಧನಶಕ್ತಿ ಯಾವುದರಿಂದಲೂ ವಂಚನೆ ಮಾಡುವುದಿಲ್ಲ ಎಂಬದು ನನ್ನ ಮಾತು. ಇದು ನಡೆಯಬೇಕಾದರೆ ನೀನು ನನ್ನ ಮನಸ್ಸನ್ನು ನಿನ್ನಲ್ಲಿ ನಿಲ್ಲಿಸಬೇಕು (ಅಥವಾ ನನ್ನಲ್ಲಿ ನಿನ್ನ ಭಕ್ತಿಯನ್ನು ಸ್ಥಿರವಾಗಿಸಬೇಕು).  
ನುಡಿ ೩: ಕೆಟ್ಟ ಜನರ ಸಹವಾಸ ಮಾಡುವುದಿಲ್ಲ ಎಂಬುದು ನನ್ನ ಮಾತು. ಇದಕ್ಕೆ ಪ್ರತಿಯಾಗಿ ನೀನು ಈ ಲೋಕದ ಮೇಲಿನ ಆಸೆ ಅಥವಾ ಸಂಸಾರದ ಮೋಹವನ್ನು ಬಿಡಿಸಬೇಕು. 
ನುಡಿ ೪: ಸಜ್ಜನರ ಒಡನಾಟ ಮಾಡದೆಯೇ ಇರುವುದಿಲ್ಲ ಎಂಬುದು ನನ್ನ ಮಾತಾದರೆ, ನೀನು ಕೆಟ್ಟವರ ಒಡನಾಟವನ್ನು ಬಿಡಿಸದೆ ಇರುವಂತಿಲ್ಲ.
ನುಡಿ ೫: ನಿನ್ನ ನಂಬದೆಯೇ ನಾನು ಬದುಕಲಾರೆ ಎಂಬುದು ನನ್ನ ಮಾತು. ಇದಕ್ಕೆ ಪ್ರತಿಯಾಗಿ ನೀನು ನನಗೆ ಒಲಿಯಬೇಕು ಅಥವಾ ನನ್ನನ್ನು ಸಲಹಬೇಕು.


ಬುಧವಾರ, ಜನವರಿ 17, 2018

mAnavaru kRuta yugadali - ugAbhOga - purandaradAsaru

ಮಾನವರು ಕೃತಯುಗದಲಿ - ಉಗಾಭೋಗ - ಪುರಂದರದಾಸರು

ಈ ಉಗಾಭೋಗವನ್ನು ಧನ್ಯಾಸಿ ರಾಗದಲ್ಲಿ ಇಲ್ಲಿ ಕೇಳಿ.


।। ಮಾನವರು ಕೃತಯುಗದಲಿ ಜಪವ ಮಾಡಲಿಬೇಕು 
ಜ್ಞಾನಸಾಧನವಿರಲಿ ಬೇಕು ತ್ರೇತಾಯುಗದಲಿ  ।
ಏನೆಂಬೆ ದ್ವಾಪರದಲಿ ಯಜ್ಞವೇ ಸಾಧನವು 
ಗಾನದಾನಗಳು ಕಲಿಯುಗದಲಿ ಪುರಂದರವಿಠ್ಠಲ ।।

ಸರಳ ಕನ್ನಡದಲ್ಲಿ ಉಗಾಭೋಗದ ಅರ್ಥ:

ಹರಿಯ ಕೃಪೆಗೆ, ಮುಕ್ತಿ ಪಡೆಯುದಕ್ಕೆ ಪ್ರತಿಯೊಂದು ಯುಗದಲ್ಲಿಯೂ ಒಂದೊಂದು ವಿಶೇಷ ಸಾಧನ. ಕೃತಯುಗದಲ್ಲಿ ಜಪ, ತ್ರೇತಾಯುಗದಲ್ಲಿ ಜ್ಞಾನ, ದ್ವಾಪರದಲ್ಲಿ ಯಜ್ಞವಾದರೆ, ಕಲಿಯುಗದಲ್ಲಿ ಕೇವಲ ಹರಿನಾಮ ಸಂಕೀರ್ತನೆ, ಸತ್ಪಾತ್ರರಿಗೆ ದಾನ ಇವುಗಳಿಂದ ಮುಕ್ತಿಯು ಸಾಧ್ಯ ಎಂದು ಪುರಂದರದಾಸರು ಸಾರಿದ್ದಾರೆ.

ಸೋಮವಾರ, ಜನವರಿ 15, 2018

benakananolle - ugAbhOga - purandaradAsaru

ಬೆನಕನನೊಲ್ಲೆನವ್ವ - ಉಗಾಭೋಗ - ಪುರಂದರದಾಸರು

ಈ ಉಗಾಭೋಗವನ್ನು ದೇಶ ರಾಗದಲ್ಲಿ ಇಲ್ಲಿ ಕೇಳಿ.


।। ಬೆನಕನೊಲ್ಲೆನವ್ವ ಕುನಕಿಯಾಡುವನ । ಷಣ್ಮುಖನನೊಲ್ಲೆನವ್ವ ಬಹುಬಾಯಿಯವನ ।।
।। ಇಂದ್ರನನೊಲ್ಲೆನವ್ವ ಮೈಯೆಲ್ಲ ಕಣ್ಣಿನವ । ಚಂದ್ರನನೊಲ್ಲೆನವ್ವ ಖಳೆಗುಂದುವನ ।।
।। ರವಿಯನೊಲ್ಲೆನವ್ವ ಉರಿದು ಹೂಳುವನ । ಹರನನೊಲ್ಲೆನವ್ವ  ಮರುಳುಗೊಂಬುವ ।।
।। ಚೆಲುವ ಚೆನ್ನಿಗರಾಯ ಜಗಕೆಲ್ಲ ಒಡೆಯನ ತಾರೆ । ಪುರಂದರವಿಠ್ಠಲನ ತಾರೆ ।।

ಸರಳ ಕನ್ನಡದಲ್ಲಿ ಈ ಉಗಾಭೋಗದ ಅರ್ಥ:

ಲಕ್ಷ್ಮಿಯು ಕ್ಷೀರಸಮುದ್ರದಿಂದ ಜನಿಸಿ ಬಂದಾಗ ಅವಳ ಸೊಬಗಿಗೆ ಬೆರಗಾಗಿ ಸುರಾಸುರರೆಲ್ಲ ಅವಳನ್ನು ವರಿಸಲು ಸಾಲು ನಿಲ್ಲುವರು. ಆಗ ಲಕ್ಷ್ಮಿಯು ಒಬ್ಬೊಬ್ಬ ದೇವತೆಯ ಅವಗುಣವನ್ನು ಎಣಿಸಿ, ಅವರನ್ನು ನಿರಾಕರಿಸಿ, ಕಡೆಯಲ್ಲಿ ಪರಿಪೂರ್ಣನಾದ ಶ್ರೀಹರಿಯನ್ನು ವರಿಸುವಳು. ಈ ಪುರಾಣ ಕಥೆಯ ಸನ್ನಿವೇಶವನ್ನು ಬಣ್ಣಿಸುತ್ತದೆ ಪುರಂದರದಾಸರ ಈ ಉಗಾಭೋಗ.

ಗಣಪತಿಯು ಕುನಕಿಯಾಡುವ ಚಿಕ್ಕಹುಡುಗ. ಹಾಗಾಗಿ ಅವನನ್ನು ವರಿಸಲಾರೆ. ಹಾಗೆಯೇ ಷಣ್ಮುಖನಿಗೆ ಆರು ಬಾಯಿಗಳು. ಆದ್ದರಿಂದ ವರಿಸಲಾರೆ. ಇಂದ್ರ ಸಹಸ್ರಾಕ್ಷ ಅಥವಾ ಅನೇಕ ಕಣ್ಣುಳ್ಳವನು. ಹಾಗಾಗಿ ವರಿಸಲಾರೆ. ಚಂದ್ರ ತಿಂಗಳಲ್ಲಿ ಒಂದು ಪಕ್ಷ  ಕ್ಷೀಣಿಸುತ್ತಾನೆ. ಹಾಗಾಗಿ ವರಿಸಲಾರೆ. ಸೂರ್ಯನು ಸುಡುವ ಬೆಂಕಿಯಂತೆ ಇರುವನು. ಹಾಗಾಗಿ ವರಿಸಲಾರೆ.  ಶಿವನು ಮೋಹಿನಿಯನ್ನು ಕಂಡು ಮರುಳುಗೊಂಡವನು. ಹಾಗಾಗಿ ವರಿಸಲಾರೆ. ಯಾವ ಅವಗುಣವೂ ಇಲ್ಲದ ಜಗದೊಡೆಯನಾದ ಹರಿಯ ತೋರಿಸೇ ಸಖಿ. ಆ ಹರಿಯನ್ನು ವರಿಸುವೆ, ಎನ್ನುವಳು ಸಾಗರಸುತೆಯಾದ ಲಕ್ಷ್ಮೀ. 

ಭಾನುವಾರ, ಜನವರಿ 14, 2018

murahara nagadhara nEne gati - purandaradAsaru

ಮುರಹರ ನಗಧರ ನೀನೇ ಗತಿ - ಪುರಂದರದಾಸರು

ಈ ಕೃತಿಯನ್ನು ಸಿಂಧುಭೈರವಿ ರಾಗದಲ್ಲಿ ಇಲ್ಲಿ ಕೇಳಿ


।। ಮುರಹರ ನಗಧರ ನೀನೇ ಗತಿ । ಧರಣಿ-ಲಕ್ಷ್ಮೀಕಾಂತ ನೀನೇ ಗತಿ ।।ಪ|| 

।। ಶಕಟಮರ್ದನ ಶರಣಾಗತ ವತ್ಸಲ । ಮಕರಕುಂಡಲಧರ ನೀನೇ ಗತಿ ।।
।। ಅಕಳಂಕ ಚರಿತ ಆದಿನಾರಾಯಣ । ರುಕುಮಿಣಿಪತಿ ಕೃಷ್ಣ ನೀನೇ ಗತಿ ।।೧।।

।। ಮನೆಮನೆಗಳ ಪೊಕ್ಕು ಕೆನೆಹಾಲು ಬೆಣ್ಣೆಯ । ಪ್ರಮಿತ ಮೆದ್ದ ಹರಿ ನೀನೇ ಗತಿ ।।
।। ಅನುದಿನ ಭಕುತರ ಬಿಡದೆ ಸಲಹುವ । ಘನಮಹಿಮ ಕೃಷ್ಣ ನೀನೇ ಗತಿ ।।೨।।

।। ಪನ್ನಗಶಯನ ಸುಪರ್ಣಗಮನ । ಪೂರ್ಣಚರಿತ ಹರಿ ನೀನೇ ಗತಿ ।।
।। ಹೊನ್ನಹೊಳೆಯಲಿ ಪುರಂದರವಿಠ್ಠಲ । ಚೆನ್ನ ಲಕ್ಷ್ಮೀಕಾಂತ ನೀನೇ ಗತಿ ।।೩।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ:

ಹರಿಯೇ ನಮ್ಮೆಲ್ಲರಿಗೂ ಗತಿ ಎಂಬುವ ಸರಳ ಭಾವ ಈ ಕೃತಿಯದ್ದು.
ಪ: ಮುರಾಸುರನ ಕೆಡುವಿದ, ಗೋವರ್ಧನ ಬೆಟ್ಟವನ್ನೆತ್ತಿದ, ಲಕ್ಷ್ಮೀ-ಭೂದೇವಿಯರ ಒಡೆಯನಾದ ಹರಿಯೇ ನಮಗೆ ಗತಿ. 
ನುಡಿ ೧: ಶಕಟಾಸುರನ ಸಂಹರಿಸಿದ, ಶರಣು ಬಂದವರ ಪೊರೆಯುವನಾದ, ಮಕರಕುಂಡಲ/ಓಲೆಗಳ ಧರಿಸಿದ, ಶುಭ್ರ ಚರಿತೆಯ ಹೊಂದಿದ, ನಾರಾಯಣ ಎನಿಸಿಕೊಂಡಿಹ, ರುಕ್ಮಿಣಿಯ ಪತಿಯಾದ ಕೃಷ್ಣನೇ ಗತಿ. 
ನುಡಿ ೨: ಕೃಷ್ಣಾವತಾರದ ಬಾಲ್ಯದಲ್ಲಿ ಗೋಪಿಕೆಯರ ಮನೆಗಳನ್ನು ಹೊಕ್ಕು ಕೆನೆಹಾಲು ಬೆಣ್ಣೆ ಮೊದಲಾದವುಗಳ್ಳನ್ನ ಬೇಕಾದಷ್ಟು ತಿಂದ, ಭಕ್ತರ ಸಲಹುವನಾದ, ಅಪಾರ ಮಹಿಮೆಯುಳ್ಳವನಾದ ಕೃಷ್ಣನೇ ಗತಿ. 
ನುಡಿ ೩: ಹಾವಿನ ಮೇಲೆ ಮಲಗಿದವನಾದ, ಗರುಡನ ಮೇಲೆ ಕುಳಿತು ಹಾರುವವನಾದ, ಪೂರ್ಣಚರಿತನಾದ, ಸುಂದರನಾದ, ಲಕ್ಷ್ಮೀ ಒಡೆಯನಾದ, ಹೊನ್ನಹೊಳೆಯಲ್ಲಿ ನಿಂತ ಹರಿಯೇ ಗತಿ. 

rAma enniro - purandaradAsaru

ರಾಮ ಎನ್ನಿರೋ - ಪುರಂದರದಾಸರು

ಈ ಕೃತಿಯನ್ನು ತಿಲ್ಲಂಗ್ ಮೊದಲಾದ ರಾಗಮಾಲಿಕೆಯಲ್ಲಿ ಇಲ್ಲಿ ಕೇಳಿ


।। ರಾಮ ರಾಮ ರಾಮ ಸೀತಾ- । ರಾಮ ಎನ್ನಿರೋ ।।ಪ।। 
।। ಅಮರಪತಿಯ ದಿವ್ಯ ನಾಮ । ಅಂದಿಗೊದಗ ಬಾರದೋ ।।ಆ.ಪ।।

।। ಭರದಿ ಯಮನ ಭಟರು ಬಂದು । ಹೊರಡಿರೆಂದು ಮೇಟೆ ಮುರಿಯೆ ।।
।। ಕೊರಳಿಗಾತ್ಮ ಸೇರಿದಾಗ । ಹರಿಯ ಧ್ಯಾನ ಒದಗದೋ ।।೧।।

।। ಇಂದ್ರಿಯಂಗಳೆಲ್ಲ ಕೂಡಿ । ಬಂದು ತನುವ ಮುಸುಕಿದಾಗ ।।
।। ಸಿಂಧುಸುತೆಯ ಪತಿಯ ನಾಮ । ಅಂದಿಗೊದಗ ಬಾರದೋ ।।೨।।

।। ಶ್ವಾಸಕೋಶವೆರಡು ಕಂಠ । ಲೇಪವಾಗಿ ಸಿಲುಕಿದಾಗ ।।
।। ವಾಸುದೇವ ಕೃಷ್ಣನ ನಾಮ । ಆ ಸಮಯಕೆ ಒದಗದೋ  ।।೩।।

।। ಶೃಂಗಾರದ ದೇಹವೆಲ್ಲ । ಅಂಗ ಬಡಿದು ಮುರಿದು ಬಿದ್ದು ।।
।। ಕಂಗಳಿಗಾತ್ಮ ಸೇರಿದಾಗ । ರಂಗನ ನಾಮ ಒದಗಡೂ ।।೪।।

।। ವಾತ-ಪಿತ್ತವೆರಡು ಕೂಡಿ । ಶ್ಲೇಷ್ಮ ಬಂದು ಒದಗಿದಾಗ ।।
।। ಧಾತು ಗುಣದಿಂದಾಗ ರಘು- । ನಾಥನ ಧ್ಯಾನ ಒದಗದೋ ।।೫।।

।। ಕಲ್ಲು-ಮರಗಳಂತೆಯೇ ಜೀವ? । ನಿಲ್ಲದಂತೆ ಮರಣ ವೇಳೆ ।।
।। ಫುಲ್ಲನಾಭ ಶ್ರೀಕೃಷ್ಣನೆಂಬೋ । ಸೊಲ್ಲು ಬಾಯಿಗೊದಗದೋ ।।೬।।

।। ಕೆಟ್ಟ ಜನ್ಮದಲ್ಲಿ ಪುಟ್ಟಿ । ದುಷ್ಟಕರ್ಮ ಮಾಡಿ ದೇಹ- ।।
।। ಬಿಟ್ಟು ಹೋಗುವಾಗ ಪುರಂದರ- । ವಿಠ್ಠಲನ ನಾಮ ಒದಗದೋ ।।೭।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ: 

ಮರಣ ಕಾಲದೊಳು ಹರಿಯ ಸ್ಮರಣೆ ಬರುವುದು ಸುಲಭವಲ್ಲ. ಹಾಗಾಗಿ ಇಂದೇ ಅಮರಪತಿ/ದೇವತೆಗಳ ಒಡೆಯನಾದ ರಾಮನ ಸ್ಮರಣೆ ಮಾಡಿ ಎಂದಿದ್ದಾರೆ ಪುರಂದರದಾಸರು. (ಹಿನ್ನೆಲೆ: ಮರಣ ಕಾಲದಲ್ಲಿ ಹರಿಸ್ಮರಣೆ ಮಾಡಿದರೆ ಮುಕ್ತಿ ಸಿಗುವುದು ಎಂಬುದು ನಂಬಿಕೆ.)
ನುಡಿ ೧: ಮರಣ ಸಮಯದಿ ಯಮನ ದೂತರು ಬಂದು ಜೀವವನ್ನು ಸೆಳೆವಾಗ, ಉಸಿರು ನಿಂತು ಪ್ರಾಣ ಹೋಗುವ ಸಮಯದಲ್ಲಿ ಹರಿಯ ಧ್ಯಾನ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ. 
ನುಡಿ ೨: ಮರಣ ಸಮಯದಲ್ಲಿ ಇಂದ್ರಿಯಗಳೆಲ್ಲಾ ಸೆಟೆದು ಬಿದ್ದಾಗ, ದೇಹ-ಮನಸ್ಸುಗಳು ಕುಗ್ಗಿದಾಗ ಹರಿಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೩: ಶ್ವಾಸಕೋಶಗಳು ಕಟ್ಟಿ ಉಸಿರು ನಿಂತಾಗ ಹರಿ ಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ. 
ನುಡಿ ೪: ಇಂದು ಗಟ್ಟಿಮುಟ್ಟಾದ ಈ ದೇಹ ಅಂದು, ಮರಣ ಸಮಯದಂದು, ಮುರಿದು ಬಿದ್ದಾಗ ಹರಿಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೫: ಈ ದೇಹದ ಮೂರು ದೋಷಗಳು (ವಾತ, ಪಿತ್ತ, ಕಫ/ಶ್ಲೇಷ್ಮ) ಬಾಧಿಸಿ ಸಪ್ತ ಧಾತುಗಳು (ರಸ, ರಕ್ತ, ಮಾಂಸ, ಮೂಳೆ, ಮಜ್ಜೆ, ಮೇಧಸ್ಸು, ಶುಕ್ರ) ಕುಗ್ಗಿದ ಮರಣ ಸಮಯದಲ್ಲಿ ಹರಿಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೬: ಕಲ್ಲು-ಮರಗಳಂತೆಯಲ್ಲ ಈ ಜೀವ. ಸಾವು ಬರುವುದು ಖಂಡಿತ. ಆದರೆ ಸಾಯುವ ಸಮಯದಲ್ಲಿ ಕಮಲನಾಭನಾದ ಹರಿಯ ಸ್ಮರಣೆ ಬರುವುದಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.
ನುಡಿ ೭: ಸಂಸಾರ ಚಕ್ರದಲ್ಲಿ ಬಿದ್ದು ಬಳಲುವಂತಹ ಜನ್ಮದಲ್ಲಿ ಬಂದು, ಅನೇಕ ಪಾಪಕರ್ಮಗಳ ಮಾಡಿ, ಕೊನೆಗೆ ಮರಣ ಸಮದಲ್ಲಿ ಹರಿಯ ಸ್ಮರಣೆ ಬರಲಿ ಎಂದರೆ ಅದು ಸಾಧ್ಯವಿಲ್ಲ. ಹಾಗಾಗಿ ಇಂದೇ ಹರಿಸ್ಮರಣೆ ಮಾಡಿ.