ಪಾಲಿಸೆ ಪದುಮಾಲಯೇ - ವಿಜಯದಾಸರ ಕೃತಿ
ಮಧ್ಯಮಾವತಿ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ.
|| ಪಾಲಿಸೆ ಪದುಮಾಲಯೆ | ನೀನೇ ಗತಿ ಪಾಲಿಸೆ ಪದುಮಾಲಯೆ ||ಪ||
|| ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದ ಗೋಕುಲ |
ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿಹ ಬಾಲಕನ ಪ್ರಿಯೆ ||ಅಪ||
||ಅರಿಯದ ತರಳನೆಂದು ಶ್ರೀಪತಿ ಸತಿ ವರವಿತ್ತು ಸಲಹೆ ಬಂಧು | ಕಾರುಣ್ಯ ಸಿಂಧು ||
||ಸರಸಿಜಾಸನ ರುದ್ರರೀರ್ವರ ವರದಿ ಮೂರ್ಖರು ಸುರರ ಬಾಧಿಸೆ |
ಹರಿವರದ ದಂಡೆತ್ತಿ ಬಹುಮುಖ ದುರುಳನ ಶಿರ ತರಿದವನ ಪ್ರಿಯೆ ||೧||
||ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದವನ್ನು ನಂಬಿದೆ ನೀ ಬಲ್ಲೆ | ತಡ ಮಾಡಲೊಲ್ಲೆ ||
|| ಚಿಣ್ಣ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ |
ಗುಣ ಸಂಪನ್ನ ರಕ್ಕಸರನ್ನು ಸೀಳಿದ ಪನ್ನಗಾದ್ರಿ ನಿವಾಸ ಹರಿಪ್ರಿಯೆ ||೨||
||ಅಜಭವಾಮರರ ಜನನಿ ಅಂಬುಜಪಾಣಿ ತ್ರಿಜಗ ಸನ್ನಿಭ ವೇಣಿ | ನಿತ್ಯ ಕಲ್ಯಾಣಿ ||
|| ಕುಜನ ಮರ್ದನ ವಿಜಯವಿಠ್ಠಲನ ಭಜಿಸಿ ಪಾಡುವ ಭಕ್ತ ಕೂಟದಿ |
ನಿಜದಿ ಸಲಹುವೆನೆಂಬ ಬಿರುದುಳ್ಳ ವಿಜಯಸಾರಥಿ ವಿಶ್ವಂಬರ ಪ್ರಿಯೆ ||೩||
ಸರಳ ಕನ್ನಡಲ್ಲಿ ಕೃತಿಯ ಅರ್ಥ
ಲಕ್ಷ್ಮಿಯನ್ನು ಪದ್ಮಾಲಯೇ ಎಂದು ಇಲ್ಲಿ ಸಂಬೋಧಿಸಲಾಗಿದೆ. ಕೃತಿಯು ದೇವಿಯನ್ನು ಹರಿಯ ಒಡತಿಯೆಂದು ಸ್ತುತಿಸಿ ಕಾಪಾಡು ಎಂದು ಪ್ರಾರ್ಥಿಸುತ್ತದೆ.
ಅನುಪಲ್ಲವಿ: ಗೋಪಿಯರಿಗೆ ಪ್ರಿಯನಾದ, ದುಷ್ಟರ ಶತ್ರುವಾದ ಬಾಲಕೃಷ್ಣನ ಪ್ರೇಯಸಿಯೇ, ಓ ಪದ್ಮಾಲಯೇ ಕಾಪಾಡು
ನುಡಿ ೧: ನನ್ನನ್ನು ಏನೂ ಅರಿಯದ ಬಾಲಕನೆಂದು ಸಲಹು, ಓ ಕರುಣೆಯ ಕಡಲೇ,
ಬ್ರಹ್ಮ ಮತ್ತು ಶಿವನ ವರಗಳಿಂದ ಬಲಿಷ್ಠರಾಗಿ ರಾವಣಾದಿ ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿದಾಗ, ಕಪಿಸೈನ್ಯದೊಂದಿಗೆ ರಾಕ್ಷಸರನ್ನು ಬಗ್ಗುಬಡಿದು ರಾವಣನ ಕೊಂದ ರಾಮನ ಪ್ರಿಯೆ, ಓ ಪದ್ಮಾಲಯೇ ಕಾಪಾಡು
ಬ್ರಹ್ಮ ಮತ್ತು ಶಿವನ ವರಗಳಿಂದ ಬಲಿಷ್ಠರಾಗಿ ರಾವಣಾದಿ ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿದಾಗ, ಕಪಿಸೈನ್ಯದೊಂದಿಗೆ ರಾಕ್ಷಸರನ್ನು ಬಗ್ಗುಬಡಿದು ರಾವಣನ ಕೊಂದ ರಾಮನ ಪ್ರಿಯೆ, ಓ ಪದ್ಮಾಲಯೇ ಕಾಪಾಡು
ನುಡಿ ೨: ಇನ್ನಾರನ್ನೂ ಬೇಡುವುದಿಲ್ಲ, ನಿನ್ನ ಮೊರೆ ಇಡುವೆ, ತಡಮಾಡದೆ ಕಾಪಾಡು.
ಪ್ರಹ್ಲಾದನ ಕರೆಗೆ ನರಸಿಂಹ ಅವತಾರವನ್ನೇ ತಾಳಿ ಬಂದು ಹಿರಣ್ಯಕಶಿಪು ಮೊದಲಾದ ರಾಕ್ಷಸರನ್ನು ಸಂಹರಿಸಿದ, ಘನಮಹಿಮನಾದ, ಗುಣಪೂರ್ಣನಾದ, ಶೇಷಾಚಲ ವಾಸಿಯಾದ, ಹರಿಯ ಪ್ರೇಯಸಿಯೇ, ಓ ಪದ್ಮಾಲಯೇ ಕಾಪಾಡು.
ನುಡಿ ೩: ಓ ಬ್ರಹ್ಮ-ಶಿವ-ಮೊದಲಾದ ದೇವತೆಗಳ ಮಾತೆಯೇ, ಕಮಲದಂತೆ ಇರುವ ಪಾದವುಳ್ಳವಳೇ, ಮೂರು ಲೋಕವನ್ನೇ ಜಡೆಯಂತೆ ಮುಡಿದವಳೇ, ಮಂಗಳೆ,
ದುರ್ಜನರ ಶತ್ರುವಾದ, ಭಕ್ತರ ರಕ್ಷಕನೆಂದು ಬಿರುದುಳ್ಳವನಾದ, ವಿಜಯಸಾರಥಿಯಾದ, ವಿಶ್ವವೆಲ್ಲ ಆವರಿಸಿರುವ ವಿಷ್ಣುವಿನ ಪ್ರೇಯಸಿಯೇ, ಓ ಪದ್ಮಾಲಯೇ ಕಾಪಾಡು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ