ಬುಧವಾರ, ನವೆಂಬರ್ 22, 2017

koDuvavanu neenu - vijayadAsaru

ಕೊಡುವವನು ನೀನು - ವಿಜಯದಾಸರ ಕೃತಿ 

ಈ ಪದವನ್ನು ಬೃಂದಾವನಿ ಸಾರಂಗ ರಾಗದಲ್ಲಿ ಇಲ್ಲಿ ಕೇಳಿ


|| ಕೊಡುವವನು ನೀನು ಕೊಂಬುವನು ನಾನು |
ಬಡ ಮನದ ಮನುಜನ ಬೇಡಿ ಫಲವೇನು? ।।ಪ||

|| ಹದಿನಾರು ಹಲ್ಲುಗಳ ಬಾಯ್ದೆರೆದು ಬೇಡಿದರೆ
ಇದು ಸಮಯವಲ್ಲೆಂದು ಪೇಳಿ ತಾನು |
ಮದನ ಕೇಳಿಗೆ ನೂರನೊಂದಾಗಿ ನೋಡುವನು
ಮದಡ ಮಾನವನೇನು ಕೊಡಬಲ್ಲ ಹರಿಯೇ? ||೧||

|| ಹೀನ ವೃತ್ತಿಯ ಜನರಿಗಾಸೆಯನು ಬಡುವುದು
ಗಾಣದೆತ್ತು ತಿರುಗಿ ಬಳಲಿದಂತೆ |
ಭಾನುಕೋಟಿತೇಜ ವಿಜಯವಿಠ್ಠಲರಾಯ
ನೀನಲ್ಲದನ್ಯತ್ರ ಕೊಡುಕೊಂಬರುಂಟೇ? ||೨||

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ

ವಿಜಯದಾಸರು ವಿಡಂಬನೆಯ ಮೂಲಕ ಮಾನವನ ಅಲ್ಪತೆಯನ್ನು, ಭಗವಂತನ ಅನಂತತೆಯನ್ನು ಬಣ್ಣಿಸಿದ್ದಾರೆ.
ಪಲ್ಲವಿಯಲ್ಲಿ ದಾಸರು ಭಗವಂತನೇ ನಮಗೆ ಸಕಲ ಭಾಗ್ಯ-ಭೋಗ್ಯಗಳನ್ನು ಕೊಡುವವನು, ನಾವು ಅವುಗಳನ್ನು ಪಡೆಯುವವರು ಅಷ್ಟೇ ಎಂದು ಹೇಳಿದ್ದಾರೆ. ಅಲ್ಲದೆ, ಮಾನವನು ತಾನು ದಾನ-ಧರ್ಮಾದಿಗಳಿಂದ ಇತರರಿಗೆ ಕೊಡುವನು, ಒಳಿತು ಮಾಡುವನು ಎಂದು ತಿಳಿದಿರುವುದು ಬರಿಯ ಭ್ರಮೆಯೇ. ಹಾಗಾಗಿ ಅಂತಹ ಅಲ್ಪ ಮಾನವನ ಬೇಡಿ ಏನೂ ಪ್ರಯೋಜನವಾಗಲಾರದು ಎಂದಿದ್ದಾರೆ.
ನುಡಿ ೧: ಒಮ್ಮೆ ಶಕ್ತಿ ಹಿಂಗಿದ ಕಾಲದಲ್ಲಿ ಅಥವಾ ಕಷ್ಟದ ಕಾಲದಲ್ಲಿ ಹರಿಯನ್ನು ಬೇಡಲು, ಅವನು ಸಹಾಯ ಮಾಡಲು ನಿರಾಕರಿಸಿದನು. ಆದರೆ, ಸರಿಯಾದ ಸಮಯ ಬಂದಾಗ, ನಾನು ನೂರು (ಹೆಚ್ಚು) ವರಗಳನ್ನು ಬೇಡಿದರೂ, ಹರಿಯು ಅವೆಲ್ಲವೂ ಕೇವಲ ಒಂದೇ ವಾರವೇನೋ (ಇವೇನು ಹೆಚ್ಚಲ್ಲ) ಎಂಬಂತೆ ಸಕಲವನ್ನೂ ಕರುಣಿಸುವನು. ಅಲ್ಪನಾದ ಮಾನವ ಹೀಗೆ ಕೃಪೆ ಮಾಡಲು ಸಾಧ್ಯವೇ? ಸಾಧ್ಯವಿಲ್ಲ.
ನುಡಿ ೨: ಸಂಕುಚಿತ ಮನೋಭಾವದ, ಫಲಾಪೇಕ್ಷೆ ಹೊಂದಿರುವ ಜನರಿಗೆ ಸೇವೆ ಮಾಡುವುದು ವ್ಯರ್ಥ. ಗಾಣದಲ್ಲಿ ಎತ್ತು ಹೇಗೆ ಸುತ್ತಿ ಸುತ್ತಿ, ಎಲ್ಲೂ ಹೋಗಲಾರದೆ, ಅಲ್ಲೇ ಸಿಕ್ಕಿ ಒದ್ದಾಡುತ್ತದೆಯೋ ಹಾಗೆಯೇ ಕೂಲಿಗಾಗಿ ಬೇರೆಯವರ ಸೇವೆ ಮಾಡುವುದು. ಹಾಗಾಗಿ, ವ್ಯರ್ಥ ಯತ್ನವನ್ನು ಬಿಟ್ಟು, ಕೋಟಿ ಸೂರ್ಯರ ಕಾಂತಿಯವನಾದ ಶ್ರೀಹರಿಯ ಸೇವೆಯನ್ನು ಮಾಡೋಣ. ಹರಿಯಲ್ಲದೆ ಇನ್ನಾರೂ ಸಲಹುವವರಿಲ್ಲ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ