ಶನಿವಾರ, ಅಕ್ಟೋಬರ್ 21, 2017

bandu nintiha nODi - purandaradAsaru

ಬಂದು ನಿಂತಿಹ ನೋಡಿ - ಪುರಂದರದಾಸರ ಕೃತಿ

ಮಧ್ಯಮಾವತಿ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ.


|| ಬಂದು ನಿಂತಿಹ ನೋಡಿ ಭೂತಳದಿ
ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ |
ನಿರಂತರ ಪೊಂದಿ ಭಜನೆಯ ಮಾಡಿ ಆ-
ನಂದಗೂಡಿ ಆನಂದಬೇಡಿ ||ಪ||

|| ವಂದಿಸುತ ಮನದೊಳಗೆ ಇವನಡಿ-
ದ್ವಂದ್ವ ಭಜಿಸಲು ಬಂದ ಭಯಹರ |
ಇಂದುಧರ ಸುರ ವೃಂದನುತ ಗೋ-
ವಿಂದ ಘನ ದಯಾಸಿಂಧು ಶ್ರೀಹರಿ ||ಅ.ಪ||

|| ದ್ವಾರ ಎಡಬಲದಲ್ಲಿ ಜಯವಿಜಯರಿಬ್ಬರು 
ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ-|
ಗಾರ ನಿಧಿ ಅಂಗುಳ್ಳಿ ವಿಸ್ತಾರದಲ್ಲಿ ||
|| ವಾರ ವಾರಕೆ ಪೂಜೆಗೊಂಬುವ | ಹಾರ ಮಕುಟಾಭರಣ ಕುಂಡಲ-
ಧಾರಿ ಭುಜಕೇಯೂರಭೂಷಿತ | ಮಾರಪಿತ ಗುಣ ಮೋಹನಾಂಗ ||
|| ಚಾರುತರ ಕರವೀರ ಕಟಿ | ಕಲ್ಹಾರ ಪೂಜಿತ ಹಾರ
ಕೊರಳೊಳು ಎಸೆಯುತಿರೆ ವದ- | ನಾರವಿಂದನು ನಸುತ ನಲಿಯುತಾ ||೧||

|| ಎಲ್ಲ ಭಕುತರಭೀಷ್ಟ ಕೊಡುವುದಕ್ಕೆ ತಾ ಕೈ-
ವಲ್ಯ ಸ್ಥಾನವ ಬಿಟ್ಟ ಶೇಷಾದ್ರಿ ಮಂದಿರದಲ್ಲಿ |
ಲೋಲುಪದಿಟ್ಟ ಸೌಭಾಗ್ಯನಿಧಿಗೆದುರಿಲ್ಲ 
ಬಲಭುಜ ಭೂಷ್ಟ ಕಸ್ತೂರಿಯಿಟ್ಟ ||
|| ಚಲ್ವ ಶಿರದಲಿ ಶೋಭಿಸುವ ಸಿರಿ- | ವಲ್ಲಭನ ಗುಣ ಪೊಗಳದಿಹ ಜಗ-
ಕುಲ್ಲರೆದೆ ಮಲ್ಲ ಮರ್ದನ ಮಾತುಳಾರಿ | ಫಲ್ಗುಣ ಸಖ ಪ್ರಕಟನಾಗಿಹ ||
|| ದುರ್ಲಭನು ಅಘದೂರ ಬಹುಮಾಂಗಲ್ಯ 
ಹೃದಯದೊಳಿಟ್ಟವಗೆ ಅಡಿಗಡಿಗೆ ನಗುತ ಶೀಘ್ರದಿ ||೨||

|| ಪದಕ ಕೌಸ್ತುಭದೋರ ಸರಗೀಯ
ಸಂದರುಶನದಿ ವಿಹಾರ ನಿಟ್ಟಿಹನು ಸನ್ಮುನಿ 
ಹೃದಯಸ್ಥಿತಿ ಗಂಭೀರ 
ಬಹು ದಾನಶೂರ ಬಹು ದಾನಶೂರ ||
|| ವಿಧಿ-ಭವಾದ್ಯರ ಪೊರೆವ ದಾತನು | ತುದಿ-ಮೊದಲು-ಮಧ್ಯಮ ರಹಿತನು
ಉದುಭವಾದಿಗಳೀವ ಕರ್ತನು | ಸದುವಿಲಾಸದಿ ಸ್ವಾಮಿ ತೀರ್ಥದಿ
ಉದಿಸುತಿರೆ ಸಿರಿಮಹಿಳೆ ಸಹಿತ | ಪದುಮನಾಭ ಪುರಂದರವಿಠ್ಠಲನು
ಪ್ರತಿವರ್ಷ ಬ್ರಹ್ಮೋತ್ಸವದಿ ಮೆರೆಯುತಾ ||೩||


ಸರಳ ಕನ್ನಡದಲ್ಲಿ ಕೃತಿಯ ಅರ್ಥ

ಕೃತಿಯು ತಿರುಮಲೆಯಲ್ಲಿ ನಿಂತ ವೆಂಕಟರಮಣನ ಬಣ್ಣಿಸಿ ಕೊಂಡಾಡುತ್ತಿದೆ.
ಶ್ರೀಹರಿಯು ಭೂವೈಕುಂಠವೆಂದೆನಿಸಿದ ತಿರುಮಲೆಗೆ ಲಕ್ಷ್ಮೀ ಸಮೇತ ಬಂದು ನೆಲೆಸಿರುವನು. ಅವನನ್ನು ಭಜಿಸಿ ಆನಂದವನ್ನು ಹೊಂದೋಣ.
ಅನುಪಲ್ಲವಿ:  ಶಿವ ಮೊದಲಾದ ದೇವತೆಗಳಿಂದ ಪೂಜಿತನಾದ ಗೋವಿಂದನ ಪಾದಗಳನ್ನು ಭಜಿಸಿದರೆ ಭಯ ನಿವಾರಣೆಯಾಗುವುದು.
ನುಡಿ ೧: ತಿರುಮಲೆಯಲ್ಲಿ ನಿಂತ  ಶ್ರೀನಿವಾಸನ ಮಂದಿರದ ಬಾಗಿಲಿನ ಎಡಬಲ ಬದಿಗಳಲ್ಲಿ ಜಯ-ವಿಜಯರು ಬಾಗಿಲು ಕಾಯುತ್ತಲಿರುವರು. ಸನಕಾದಿಗಳು ಸ್ತುತಿಸುವರು. ಶೃಂಗಾರ ಮೂರುತಿಯಾದ ಶ್ರೀನಿವಾಸನನ್ನು ವಿಸ್ತಾರವಾಗಿ ಹಾಡಿ  ಹೊಗಳುವರು.
ಪ್ರತಿ ಶುಕ್ರವಾರದಂದು ವಿಶೇಷವಾಗಿ ಪೂಜೆಯಾಗುವ, ಹಾರ-ವಸ್ತ್ರ-ಒಡವೆ-ಕಿವಿಯೋಲೆ-ತೋಳಬಂದಿಗಳಿಂದ ಅಲಂಕೃತನಾದ, ಮನ್ಮಥನ ತಂದೆಯಾದ, ಗುಣಪೂರ್ಣನಾದ, ಎಲ್ಲರ ಮೋಹಿಸುವ ಸೌಂದರ್ಯ ಉಳ್ಳವನಾದ, ಕರವೀರ ಮೊದಲಾದ ಹೂಗಳ ಬಗೆಬಗೆಯ ಹಾರಗಳಿಂದ ಶೋಭಿಸುವ, ಮಂದಹಾಸ ಬೀರುವ ವೆಂಕಟೇಶನ ಭಜಿಸೋಣ.
ನುಡಿ ೨: ಭಕ್ತರ ಬೇಡಿಕೆಗಳನ್ನು ಪೂರೈಸಲೆಂದೇ ವೈಕುಂಠವನ್ನು ಬಿಟ್ಟು ಭೂಮಿಯಲ್ಲಿ ಬಂದು ನೆಲೆಸಿಹನು. ಸೌಭಾಗ್ಯದ ಗಣಿಯಾದ, ಕಸ್ತೂರಿ ತಿಲಕವನಿಟ್ಟಿರುವ ಚೆಲುವನಾದ ಈತನನ್ನು ಪರಾಕ್ರಮದಲ್ಲಿ  ಮೀರಿಸವವರಿಲ್ಲ.
ಸಕಲ ಸಂಪತ್ತಿಗೆ ಒಡೆಯನಾದ ಈತನ ಗುಣವಿಶೇಷಗಳನ್ನು ಲೋಕದಲ್ಲಿ ಹೊಗಳದಿರುವವರು ಕೆಟ್ಟಮನಸ್ಸಿನವರೇ ಹೊರತು ಶುದ್ಧಹೃದಯಿಗಳಲ್ಲ.
ಕೃಷ್ಣಾವತಾರದಲ್ಲಿ ಮಲ್ಲರ ಸೆದೆಬಡಿದು, ಸೋದರಮಾವನ ಕೊಂದು, ಅರ್ಜುನನ ಸಖನಾದ ಈತನು, ಎಲ್ಲರಿಗೂ ಯಾವಾಗಲೂ ಸಿಗುವವನಲ್ಲ (ಭಕ್ತಿಯಿಂದ ಮಾತ್ರ ಸಿಗುವವನು). ಇವನು ಪಾಪರಹಿತನು ಹಾಗು ತನ್ನ ಹೃದಯದಲ್ಲಿ ಸಕಲ ಮಂಗಳಕರ ದ್ರವ್ಯಗಳನ್ನು ಭಕ್ತರಿಗೆಂದೇ ಇರಿಸಿರುವನು. ಇಂತಹ, ನಮ್ಮೆದುರು ಬಂದುನಿಂತಿರುವ ಶ್ರೀಹರಿಯನ್ನು ಪದೇಪದೇ ಸಂತೋಷದಿಂದ ಭಜಿಸೋಣ, ಬೇಗ ಬನ್ನಿ.
ನುಡಿ ೩: ಕೌಸ್ತುಭ ಮಣಿ, ಪದಕ, ಕಡುಗ/ಬಳೆ, ಸರಗಳಿಂದ ಅಲಂಕೃತನಾದ ಈತನ ದರ್ಶನದಿಂದ ಉಲ್ಲಾಸವಾಗುವುದು. ತಪಸ್ವಿಗಳ ಏಕಾಗ್ರ ಭಾವದಂತೆ ಗಂಭೀರ ಮನಸ್ಸಿನ ಈತನು ಭಕ್ತರಿಗೆ ಬಹು ಉದಾರಿಯು.
ಬ್ರಹ್ಮ-ಶಿವ-ಮೊದಲಾದ ದೇವತೆಗಳ ಸಲಹುವನು, ಸಕಲರಿಗೂ ಸಕಲವನ್ನೂ ಕೊಡುವವನು, ಆದಿ-ಅಂತ್ಯಗಳಿಲ್ಲದವನು, ಸೃಷ್ಠಿ ಮೊದಲಾದವುಗಳ ಕಾರಣನಾದ ಈತ, ಪ್ರತಿವರ್ಷ ಬ್ರಹೋತ್ಸವದಲ್ಲಿ ಸ್ವಾಮಿತೀರ್ಥದ ಸನ್ನಿಧಿಯಲ್ಲಿ ಶ್ರೀ-ಭೂದೇವಿಯರೊಡನೆ ತನ್ನ ಮಹಿಮೆಯಿಂದ ಮೆರೆಯುವನು. ಇಂತಹ ಶ್ರೀನಿವಾಸನನ್ನು ಭಜಿಸೋಣ.

ಶನಿವಾರ, ಸೆಪ್ಟೆಂಬರ್ 30, 2017

pAlise padumAlayE - vijayadAsaru

ಪಾಲಿಸೆ ಪದುಮಾಲಯೇ - ವಿಜಯದಾಸರ  ಕೃತಿ

ಮಧ್ಯಮಾವತಿ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ. 


|| ಪಾಲಿಸೆ ಪದುಮಾಲಯೆ | ನೀನೇ ಗತಿ ಪಾಲಿಸೆ ಪದುಮಾಲಯೆ ||ಪ||

|| ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದ ಗೋಕುಲ |
ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿಹ ಬಾಲಕನ ಪ್ರಿಯೆ ||ಅಪ||

||ಅರಿಯದ ತರಳನೆಂದು ಶ್ರೀಪತಿ ಸತಿ ವರವಿತ್ತು ಸಲಹೆ ಬಂಧು | ಕಾರುಣ್ಯ ಸಿಂಧು ||
||ಸರಸಿಜಾಸನ ರುದ್ರರೀರ್ವರ ವರದಿ ಮೂರ್ಖರು ಸುರರ ಬಾಧಿಸೆ |
ಹರಿವರದ ದಂಡೆತ್ತಿ ಬಹುಮುಖ ದುರುಳನ ಶಿರ ತರಿದವನ ಪ್ರಿಯೆ ||೧||

||ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದವನ್ನು ನಂಬಿದೆ ನೀ ಬಲ್ಲೆ | ತಡ ಮಾಡಲೊಲ್ಲೆ ||
|| ಚಿಣ್ಣ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ |
ಗುಣ ಸಂಪನ್ನ ರಕ್ಕಸರನ್ನು ಸೀಳಿದ ಪನ್ನಗಾದ್ರಿ ನಿವಾಸ ಹರಿಪ್ರಿಯೆ ||೨||

||ಅಜಭವಾಮರರ ಜನನಿ ಅಂಬುಜಪಾಣಿ ತ್ರಿಜಗ ಸನ್ನಿಭ ವೇಣಿ | ನಿತ್ಯ ಕಲ್ಯಾಣಿ ||
|| ಕುಜನ ಮರ್ದನ  ವಿಜಯವಿಠ್ಠಲ  ಭಜಿಸಿ ಪಾಡುವ ಭಕ್ತ ಕೂಟದಿ |
ನಿಜದಿ ಸಲಹುವೆನೆಂಬ ಬಿರುದುಳ್ಳ ವಿಜಯಸಾರಥಿ ವಿಶ್ವಂಬರ ಪ್ರಿಯೆ ||೩||

ಸರಳ ಕನ್ನಡಲ್ಲಿ ಕೃತಿಯ ಅರ್ಥ 

ಲಕ್ಷ್ಮಿಯನ್ನು ಪದ್ಮಾಲಯೇ ಎಂದು ಇಲ್ಲಿ ಸಂಬೋಧಿಸಲಾಗಿದೆ. ಕೃತಿಯು ದೇವಿಯನ್ನು ಹರಿಯ ಒಡತಿಯೆಂದು ಸ್ತುತಿಸಿ ಕಾಪಾಡು ಎಂದು ಪ್ರಾರ್ಥಿಸುತ್ತದೆ. 
ಅನುಪಲ್ಲವಿ: ಗೋಪಿಯರಿಗೆ ಪ್ರಿಯನಾದ, ದುಷ್ಟರ ಶತ್ರುವಾದ ಬಾಲಕೃಷ್ಣನ ಪ್ರೇಯಸಿಯೇ, ಓ ಪದ್ಮಾಲಯೇ ಕಾಪಾಡು  
ನುಡಿ : ನನ್ನನ್ನು ಏನೂ ಅರಿಯದ ಬಾಲಕನೆಂದು ಸಲಹು, ಓ ಕರುಣೆಯ ಕಡಲೇ,
ಬ್ರಹ್ಮ ಮತ್ತು ಶಿವನ ವರಗಳಿಂದ ಬಲಿಷ್ಠರಾಗಿ ರಾವಣಾದಿ ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿದಾಗ, ಕಪಿಸೈನ್ಯದೊಂದಿಗೆ ರಾಕ್ಷಸರನ್ನು ಬಗ್ಗುಬಡಿದು ರಾವಣನ ಕೊಂದ ರಾಮನ ಪ್ರಿಯೆ, ಓ ಪದ್ಮಾಲಯೇ ಕಾಪಾಡು 
ನುಡಿ ೨: ಇನ್ನಾರನ್ನೂ ಬೇಡುವುದಿಲ್ಲ, ನಿನ್ನ ಮೊರೆ ಇಡುವೆ, ತಡಮಾಡದೆ ಕಾಪಾಡು. 
ಪ್ರಹ್ಲಾದನ ಕರೆಗೆ ನರಸಿಂಹ ಅವತಾರವನ್ನೇ ತಾಳಿ ಬಂದು ಹಿರಣ್ಯಕಶಿಪು ಮೊದಲಾದ ರಾಕ್ಷಸರನ್ನು ಸಂಹರಿಸಿದ, ಘನಮಹಿಮನಾದ, ಗುಣಪೂರ್ಣನಾದ, ಶೇಷಾಚಲ ವಾಸಿಯಾದ, ಹರಿಯ ಪ್ರೇಯಸಿಯೇ, ಓ ಪದ್ಮಾಲಯೇ ಕಾಪಾಡು. 
ನುಡಿ ೩: ಓ ಬ್ರಹ್ಮ-ಶಿವ-ಮೊದಲಾದ ದೇವತೆಗಳ ಮಾತೆಯೇ, ಕಮಲದಂತೆ ಇರುವ ಪಾದವುಳ್ಳವಳೇ, ಮೂರು ಲೋಕವನ್ನೇ ಜಡೆಯಂತೆ ಮುಡಿದವಳೇ, ಮಂಗಳೆ,
ದುರ್ಜನರ ಶತ್ರುವಾದ, ಭಕ್ತರ ರಕ್ಷಕನೆಂದು ಬಿರುದುಳ್ಳವನಾದ, ವಿಜಯಸಾರಥಿಯಾದ, ವಿಶ್ವವೆಲ್ಲ ಆವರಿಸಿರುವ ವಿಷ್ಣುವಿನ ಪ್ರೇಯಸಿಯೇ, ಓ ಪದ್ಮಾಲಯೇ ಕಾಪಾಡು.

ballavareniparu - kanakadAsaru

ಬಲ್ಲವರೆನಿಪರು - ಕನಕದಾಸರ ಅಪರೂಪದ ಕೃತಿ

ವಿದ್ವಾನ್  ಆರ್. ಕೆ. ಶ್ರೀಕಂಠನ್ ರವರ ಧ್ವನಿಯಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ. 


|| ಬಲ್ಲವರೆನಿಪರು ಎಲ್ಲಾರು ಅರಿಯರು ||ಪ||
|| ಫುಲ್ಲಲೋಚನ ಪೂರ್ಣ ಬ್ರಹ್ಮನೆಂಬುದನು ||ಅ.ಪ||

||ಅಜಜನಾಧಿಕ ಬಲ್ಲ ಅನಲಸ್ನೇಹಿತ ಬಲ್ಲ
ಗಜಚರ್ಮಾಂಬರ ಬಲ್ಲ ಗರುಡ ಬಲ್ಲ |
ಭುಜಗೇಶ್ವರ ಬಲ್ಲ ಭೂಮಿಲೋಚನ ಬಲ್ಲ
ತ್ರಿಜಗಾಧಿಪ ತ್ರಿವಿಕ್ರಮನೆಂಬುದನು ||೧||

|| ಶುಕಯೋಗೀಶ್ವರ ಬಲ್ಲ ಸುಗುಣ ನಾರದ ಬಲ್ಲ
ಅಕೂಟ ಪ್ರಹ್ಲಾದ ಬಲ್ಲ ಬಲಿಯು ಬಲ್ಲ |
ರುಕುಮಾಂಗದ ಬಲ್ಲ ಋಷಿ ಪರಾಶರ ಬಲ್ಲ
ಮಕರಕುಂಡಲಧರ ಪರಮಾತ್ಮನೆಂಬುದೆನು ||೨||

|| ಅಂಬರೀಶನು ಬಲ್ಲ ಅತ್ರಿ ಋಷಿಯು ಬಲ್ಲ
ಅಂಬರಾಧಿಪ ಬಲ್ಲ ಹಯದೇವ ಬಲ್ಲ |
ಬೆಂಬಿಡದುದ್ಧವ ಬಲ್ಲ ಬೇಡಿದ ಧ್ರುವ ಬಲ್ಲ
ಕಂಬುಚಕ್ರಾಂಕಿತ ಕರ್ಮಹರನೆಂಬುದನು ||೩||

|| ವಸಿಷ್ಠ ಮುನಿ ಬಲ್ಲ ವರ ವಿಭೀಷಣ ಬಲ್ಲ
ವಿಶಿಖಶಯನ ಬಲ್ಲ ವಿದುರ ಬಲ್ಲ |
ರಸಿಕ ವಾಲ್ಮೀಕಿ ಬಲ್ಲ ರಾಜಜನಕ ಬಲ್ಲ
ಶಶಿಮಿತ್ರನೇತ್ರ ಸರ್ವೋತ್ತಮನೆಂಬುದನು ||೪||

|| ವಾಖೆಯಾಕ್ರೂರ ಬಲ್ಲ ವಚನದಿ ಶೌನಕ ಬಲ್ಲ
ಯೋಗಿ ಕಪಿಲ ಬಲ್ಲ ಭೃಗು ಬಲ್ಲನು
ತ್ಯಾಗಿ ಧರ್ಮಜ ಬಲ್ಲ ರಣದೊಳರ್ಜುನ ಬಲ್ಲ
ಕಾಗಿನೆಲೆಯಾದಿ ಕೇಶವನೆಂಬುದನು ||೫||

ಸರಳ ಕನ್ನಡದಲ್ಲಿ ಕೃತಿಯ ಅರ್ಥ

ಪರಬ್ರಹ್ಮನೆಂದು ವೇದಗಳಲ್ಲಿ ಕರೆಸಿಕೊಳ್ಳುವ ಆ ದೇವನನ್ನು ಅನೇಕರು ತಿಳಿದಿರುವೆನೆಂದು ಭಾವಿಸುವರು, ಆದರೆ ಎಲ್ಲರೂ ತಿಳಿದಿರಲಾರರು ಎಂದು ಕನಕದಾಸರು ಹೇಳಿರುವರು.
ಆ ಪರದೈವವನ್ನು ನಿಜವಾಗಿ ತಿಳಿದಿರುವ ಅನೇಕ ಪೌರಾಣಿಕ ವ್ಯಕ್ತಿಗಳನ್ನು ಈ ಕೃತಿಯ ನುಡಿಗಳು ಪಟ್ಟಿಮಾಡಿ ಉಲ್ಲೇಖಿಸುತ್ತವೆ.