ಬುಧವಾರ, ನವೆಂಬರ್ 22, 2017

chintyake maDuti - muddu viTThala

ಚಿಂತ್ಯಾಕೆ ಮಾಡುತಿ ಚಿನ್ಮಯನಿದ್ದಾನೆ - ಮುದ್ದುವಿಠ್ಠಲರ ರಚನೆ 

ಎಚ್. ಕೆ. ನಾರಾಯಣ ಮತ್ತು ಸಂಗಡಿಗರ ಧ್ವನಿಯಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ಚಿಂತ್ಯಾಕೆ ಮಾಡುತಿ ಚಿನ್ಮಯನಿದ್ದಾನೆ । ಚಿಂತಾರತ್ನವೆಂಬೋ ಅನಂತನಿದ್ದಾನೆ ।।ಪ।।

।। ಎಳ್ಳುಮೊನೆಯ ಮುಳ್ಳುಕೊನೆಯ । ಪೊಳ್ಳು ಬಿಡದೆ ಒಳಗೆ ಹೊರಗೆ ।
ಎಲ್ಲಾ ಠಾವಿನಲ್ಲಿ ಲಕುಮಿ । ನಲ್ಲನಿದ್ದಾನೆ ಪ್ರಾಣಿ ।।೧।।

।। ಗೋಪ್ತ ತ್ರಿಜಗವ್ಯಾಪ್ತ ಭಜಕರ । ಆಪ್ತನೆನಿಸಿ ಕಂಭದಲ್ಲಿ ।
ಪ್ರಾಪ್ತನಾದ ಪ್ರಹ್ಲಾದನ ಪರ- । ಮಾಪ್ತನಿದ್ದಾನೆ ಪ್ರಾಣಿ ।।೨।।

।। ಹಿಂದೆ ನಿನ್ನ ಸಲಹಿದರಾರು । ಮುಂದೆ ನಿನ್ನ ಕೊಲ್ಲುವರಾರು ।
ಎಂದಿಗಂದಿಗಿಂದಿಗೂ ಗೋ- । ವಿಂದನಿದ್ದಾನೆ ಪ್ರಾಣಿ ।।೩।।

।। ಮುಕ್ಕಣ್ಣ ದೇವರ್ಗಳಿಗೆ । ಸಕ್ಕದಿರುವ ಕಿರಿಯವರಿಯ ।
ಚಿಕ್ಕವರಿಗೆ ಅಜರ ಪದವಿಯ । ದಕ್ಕಿಸಿದ್ದಾನೆ ಪ್ರಾಣಿ ।।೪।।

।। ಬಲ್ಲಿದ ಭಜಕರ ಹೃದಯ- । ದಲ್ಲಿ ನಿಂತು ಮುದ್ದುವಿಠ್ಠಲ
ಸೊಲ್ಲುಸೊಲ್ಲಿಗವರ ಬಯಕೆ । ಸಲ್ಲಿಸುತಿದ್ದಾನೆ ಪ್ರಾಣಿ ।।೫।।

ಸರಳ ಕನ್ನಡದಲ್ಲಿ ಕೃತಿಯ ಅರ್ಥ 

ಸ್ಮರಣೆಯಿಂದ ಚಿಂತೆ ಎಲ್ಲವ ಕಳೆವನು ಹರಿ ಎಂಬ ಸರಳ ತತ್ವವನ್ನು ಪ್ರಾಸಗಳಿಂದ ಪೋಣಿಸಿದ ಈ ಪದದಲ್ಲಿ ತಿಳಿಸಿದ್ದಾರೆ  ದಾಸರು. ಹರಿಯ ಧ್ಯಾನದ ಹೊರತು ಚಿಂತೆಗಳೆಲ್ಲ ವ್ಯರ್ಥ. ಆದ್ದರಿಂದ, ಓ ಪ್ರಾಣಿ! ಹರಿ ಧ್ಯಾನ ಮಾಡು ಎಂದಿದ್ದಾರೆ.
ನುಡಿ ೧: ನಮ್ಮನ್ನು ಸಲಹಲು ಸಕಲ ಸ್ಥಳಗಳಲ್ಲಿಯೂ ಇರುವನು ಹರಿ. ಎಳ್ಳಿನ ತುದಿಯಲ್ಲೂ, ಮುಳ್ಳಿನ ಚೂಪಾದ ತುದಿಯಲ್ಲೂ, ಸ್ವಲ್ಪವೂ ಪೊಳ್ಳು/ಖಾಲಿ ಬಿಡದೆ ಎಲ್ಲೆಡೆ ಆವರಿಸಿರುವನು ಲಕ್ಷ್ಮಿಯ ಪ್ರಿಯಕರ.
ನುಡಿ ೨: ಕಣ್ಣಿಗೆ ಕಾಣಿಸದ ಸೂಕ್ಷ್ಮ ಬಗೆಯಲ್ಲಿ ಜಗವೆಲ್ಲ ತುಂಬಿ, ಪ್ರಹ್ಲಾದನ ಕಷ್ಟಕಾಲದಲ್ಲಿ ಕಂಭದಲ್ಲಿ ಕಾಣಿಸಿಕೊಂಡಂತೆ ಭಕ್ತರಿಗೆ ಕಾಣಿಸಿಕೊಳ್ಳುವನು ಹರಿ.
ನುಡಿ ೩: ನಮಗೆ ಕಾಲಕಾಲಕ್ಕೆ ಜೀವನ-ಮರಣಗಳನ್ನು ಕೊಟ್ಟು, ಸದಾ ಕಾಯ್ದು ಸಲಹುವವನು ಗೋವಿಂದನಾದ ಹರಿ. 
ನುಡಿ ೪: ಶಿವ ಮೊದಲಾದ ದೇವರುಗಳನ್ನು ಜಗತ್ತನು ನಡೆಸುವ ಕಾರ್ಯದಲ್ಲಿ ತೊಡಗಿಸಿ, ಅವರಿಗೆ ಶಾಶ್ವತ ಪದವಿ ಕೊಟ್ಟು ನಡೆಸುವವನು ಹರಿ.
ನುಡಿ ೫: ತನ್ನನ್ನು ಅರಿತ ಭಕ್ತರ ಹೃದಯದಲ್ಲಿ ನಿಂತು, ಅವರು ಮಾತುಮಾತಿಗೆ ಬಯಸಿದ (ಮನಸ್ಸಿಗೆ ಬಂದ) ಭಾಗ್ಯಗಳನ್ನೆಲ್ಲಾ ಕೊಟ್ಟು ಪೊರೆಯುವವನು ಹರಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ