ನಾಮ ಸಂಕೀರ್ತನೆ - ಪುರಂದರದಾಸರ ಕೃತಿ
ಧನ್ಯಾಸಿ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ.
।। ನಾಮ ಸಂಕೀರ್ತನೆ ಅನುದಿನ ಮಾಳ್ಪಗೆ । ನರಕ ಭಯಗಳುಂಟೇ? ।।ಪ।।
।। ನಾಮವೊಂದೇ ಯಮನಾಳ್ಗಳನೊದೆದು । ಅಜಾಮಿಳಗೆ ಸುಕ್ಷೇಮವಿತ್ತ ಹರಿ- ।।ಅ. ಪ।।
।। ಕೇಸರಿಗಂಜದ ಮೃಗವುಂಟೇ । ದಿನೇಶನಿಗಂಜದ ತಮವುಂಟೇ ।।
।। ವಾಸುದೇವ ವೈಕುಂಠ ಜಗನ್ಮಯ । ಕೇಶವ ಕೃಷ್ಣ ಎಂದುದ್ಧರಿಸುವ ।।೧।।
।। ಗರುಡನಿಗಂಜದ ಫಣಿಯುಂಟೇ ಬಲು । ಪ್ರಳಯಕಾಲದಿ ಜೀವಿಪರುಂಟೇ ।।
।। ನರಹರಿ ನಾರಾಯಣ ದಾಮೋದರ । ಪರಮಪುರುಷ ಪುರಂದರವಿಠ್ಠಲ ಎಂಬೋ ।।೨।।
ಸರಳ ಕನ್ನಡದಲ್ಲಿ ಕೃತಿಯ ಅರ್ಥ
ಹರಿನಾಮ ಸ್ಮರಣೆಯ ಮಹಿಮೆಯನ್ನು ದೃಷ್ಟಾಂತ-ರೂಪಕಗಳಿಂದ ಪುರಂದರದಾಸರು ಬಣ್ಣಿಸಿಹರು.
ಪಲ್ಲವಿ: ನಿತ್ಯ ಹರಿನಾಮ ಸ್ಮರಣೆ ಮಾಡುವವನಿಗೆ ನರಕದ ಭಯವಿಲ್ಲ.
ಅನುಪಲ್ಲವಿ: ದೃಷ್ಟಾಂತವಾಗಿ ಅಜಾಮಿಳನ ಕಥೆಯನ್ನು ಉಲ್ಲೇಖಿಸಿದ್ದಾರೆ - ಹರಿನಾಮ ಸ್ಮರಣೆಯೊಂದರಿಂದ ನರಕ ತಪ್ಪಿಸಿಕೊಂಡ ಅಜಾಮಿಳನಂತೆ. ಭಾಗವತ ಪುರಾಣದಲ್ಲಿ ಅಜಾಮಿಳನ ಕಥೆಯು ವಿವರಿಸಿದ್ದು, ಅಜಾಮಿಳನು ಧರ್ಮಭ್ರಷ್ಟನಾದರೂ ತನ್ನ ಕೊನೆಗಾಲದಲ್ಲಿ ತನ್ನ ಮಗನ ಹೆಸರಾದ ನಾರಾಯಣ ಎಂದು ಕೂಗಲು, ಆತನ ಪಾಪಗಳೆಲ್ಲ ನಾಶವಾಗಿ ನರಕದಿಂದ ಪಾರಾದ.
ನುಡಿ ೧: ಹೇಗೆ ಸಿಂಹಕ್ಕೆ ಹೆದರದ ಪ್ರಾಣಿಯಿಲ್ಲವೋ, ಹೇಗೆ ಸೂರ್ಯನಿಗೆ ಹೆದರದ ಕತ್ತಲೆ ಇಲ್ಲವೋ, ಹಾಗೆಯೇ ಹರಿಯ ನಾಮಸ್ಮರಣೆಗೆ ಹೆದರದ ನರಕ ಇಲ್ಲ.
ನುಡಿ ೨: ಹೇಗೆ ಗರುಡನಿಗೆ ಹೆದರದ ಹಾವಿಲ್ಲವೋ, ಹೇಗೆ ಪ್ರಳಯ ಎಲ್ಲವನ್ನೂ ನಾಶ ಮಾಡುವುದೋ, ಹಾಗೆಯೇ ಹರಿ ನಾಮ ಸ್ಮರಣೆ ಪಾಪಗಳೆಲ್ಲವ ನಾಶ ಮಾಡಿ ನರಕದಿಂದ ತಪ್ಪಿಸುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ