ಆರಿಗಾದರೂ ಪೂರ್ವ ಕಲ್ಪನೆ ತಪ್ಪದೊ - ಕನಕದಾಸರು
ಈ ಪದವನ್ನು ನೀಲಾಂಬರಿ ರಾಗದಲ್ಲಿ ಇಲ್ಲಿ ಕೇಳಿ.
।। ಆರಿಗಾದರೂ ಪೂರ್ವ ಕಲ್ಪನೆ ತಪ್ಪದೊ । ಬೇರೆ ಬಯಸಿದರೆ ಬರಲರಿಯದಯ್ಯ ।।ಪ।।
।। ರಾಮಚಂದ್ರನ ಸೇವೆ ಮಾಡಿಮೆಚ್ಚಿಸಿ ಮಹಾ- । ತಾಮಸನ ಗರ್ವವನು ಮುರಿದು ಬಂದ ।।
।। ರೋಮ ಕೋಟಿ ಲಿಂಗವೆನಿಸಿದಾ ಹನುಮನಿಗೆ । ಗ್ರಾಮಗಳ ಕಾಯ್ದುಕೊಂಡಿರುವ ಮನೆಯಾಯ್ತೋ ।।೧।।
।। ಸುರಪತಿಯ ಗೆದ್ದು ಸುಧೆಯ ತಂದು ಮಾತೆಯ । ಸೆರೆಯನು ಪರಿಹರಿಸಿ ಬಹುಭಕ್ತನೆನಿಸಿ ।।
।। ಹರಿಗೆ ವಾಹನಾಗಿ ಹದಿನಾಲ್ಕು ಲೋಕವನು । ಚರಿಸಿದಾ ಗರುಡನಿಗೆ ಮನೆ ಮರದ ಮೇಲಾಯ್ತೋ ।।೨।।
।। ಪೊಡವಿ ಭಾರವ ಹೊತ್ತು ಮೃಡಗೆ ಭೂಷಣನಾಗಿ । ಹೆಡೆಯೊಳಗೆ ಮಾಣಿಕ್ಯವಿಟ್ಟುಕೊಂಡು ।।
।। ಬಿಡದೆ ಶ್ರೀಹರಿಗೆ ಹಾಸಿಗೆಯಾದ ಫಣಿಪತಿಗೆ । ಅಡವಿಯೊಳಗಣ ಹುತ್ತ ಮನೆಯಾಯಿತಯ್ಯ ।।೩।।
।। ಮೂರುಲೋಕದ ಒಡೆಯ ಮುಕ್ಕಣ್ಣನೆಂಬಾತ । ಸಾರುತಿದೆ ಸಟೆಯಲ್ಲ ವೇದವಾಕ್ಯ ।।
।। ಪಾರ್ವತೀಪತಿಯಾದ ಕೈಲಾಸದೊಡೆಯನಿಗೆ । ಊರ ಹೊರಗಣ ಮಸಣ ಮನೆಯಾಯಿತಯ್ಯ ।।೪।।
।। ಮೀರಲಳವಲ್ಲವೋ ಮುನ್ನ ಮಾಡಿದ್ದು । ಆರು ಪರಿಹರಿಸಿಕೊಂಬುವರಿಲ್ಲವೋ ।।
।। ಮಾರಪಿತ ಕಾಗಿನೆಲೆಯಾದಿಕೇಶವರಾಯ । ಕಾರಣಕೆ ಕರ್ತನೀಕಡೆ ಹಾಯಿಸಯ್ಯ ।।೫।।
ಸರಳ ಕನ್ನಡದಲ್ಲಿ ಕೃತಿಯ ಅರ್ಥ
ಕನಕದಾಸರು 'ಹಣೆಯ ಬರಹವನ್ನು ಯಾರೂ ತಿದ್ದಲಾರರು' ಎಂದಿದ್ದಾರೆ ಈ ಪದದಲ್ಲಿ. ಇದಕ್ಕೆ ನಾಲ್ಕು ಪೌರಾಣಿಕ ನಿದರ್ಶನಗಳನ್ನು ನಾಲ್ಕು ನುಡಿಗಳಲ್ಲಿ ನೀಡಿದ್ದಾರೆ.
ಪಲ್ಲವಿ: ಪೂರ್ವ ಕಲ್ಪನೆ ಅಥವಾ ವಿಧಿಯನ್ನು ತಪ್ಪಿಸಿಕೊಳ್ಳಲು ಆಗದು. ಬೇರೆ ಏನನ್ನೋ ಬಯಸಿದರೆ ಅದು ಸಾಧ್ಯವಾಗಲಾರದು.
ನುಡಿ ೧: ಹನುಮಂತನ ಉದಾಹರಣೆ - ಶ್ರೀರಾಮನ ಸೇವೆಮಾಡಿ, ರಾವಣಸೈನ್ಯವನ್ನು ಮೆಟ್ಟಿ, ರೋಮರೋಮಕ್ಕೆ ಕೋಟಿ ಲಿಂಗವನ್ನು ಸೃಷ್ಟಿಸಿದ ಹನುಮಂತ ಪ್ರತಿ ಗ್ರಾಮದ ಹೊರಗಿನ ಗುಡಿಯಲ್ಲಿ ಕೂತು ಗ್ರಾಮವನ್ನು ಕಾಯುವವನಾಗಿದ್ದಾನೆ. ಎಷ್ಟೇ ಮಹಿಮಾನ್ವಿತನಾದರೂ ಹನುಮಂತನು ಐಶ್ವರ್ಯ-ಭೋಗಗಳನ್ನು ಬಿಟ್ಟು ಗ್ರಾಮದ ಹೊರಗಿನ ಗುಡಿಯಲ್ಲಿ ವಿಧಿನಿಶ್ಚಿತ ಕರ್ಮವಾದ ಗ್ರಾಮರಕ್ಷಣೆ ಮಾಡುತ್ತಿರುವನು.
ನುಡಿ ೨: ಗರುಡನ ಉದಾಹರಣೆ - ತಾಯಿ ವಿನತೆ ಮಲತಾಯಿ ಕದ್ರುವಿನ ಮೋಸದ ಸ್ಪರ್ಧೆಯಲ್ಲಿ ಸೋತು ದಾಸಿಯಾಗಿ ಸೆರೆಯಲ್ಲಿ ಸಿಕ್ಕಿದಾಗ, ವಿನತೆಯ ಸೆರೆ ಬಿಡಿಸಲು ಮಗನಾದ ಗರುಡನು ದೇವತೆಗಳನ್ನು ಯುದ್ಧದಲ್ಲಿ ಗೆದ್ದು, ಇಂದ್ರನನ್ನು ಒಲಿಸಿ, ಅಮೃತವನ್ನು ತಂದು ಕದ್ರುವಿನ ಮಕ್ಕಳಾದ ಸರ್ಪಗಳಿಗೆ ಕೊಟ್ಟನು. ಇದರಿಂದ ವಿನತೆಯು ಮುಕ್ತಳಾದಳು. ಅನಂತರ ಶ್ರೀಹರಿಗೆ ವಾಹನನಾಗಿ ಸಕಲ ಲೋಕಗಳಲ್ಲಿ ಓಡಾಡುವನಾದ ಗರುಡ. ಇಂತಹ ಮಹಿಮಾವಂತನಾದರೂ ಗರುಡನ ಮನೆಯು ಮರದ ಮೇಲಿನ ಒಂದು ಗೂಡು ಅಷ್ಟೇ!
ನುಡಿ ೩: ನಾಗರಾಜನ ಉದಾಹರಣೆ - ಹಾವುಗಳ ಒಡೆಯನಾದ ನಾಗರಾಜ ತನ್ನ ಹೆಡೆಯ ಮೇಲೆ ಇಡೀ ಜಗತ್ತನ್ನೇ ಎತ್ತಿ ಹಿಡಿದಿರುವನು. ಶಿವನ ಕೊರಳನ್ನು ಅಲಂಕರಿಸಿರುವನು. ತನ್ನ ಹೆಡೆಯಲ್ಲಿ ನಾಗಮಣಿ ಧರಿಸಿರುವನು. ಹಾಗೂ ಶ್ರೀಹರಿಗೆ ಹಾಸಿಗೆಯಾಗಿ ಸೇವೆ ಮಾಡುತ್ತಿರುವನು. ಇಂತಹ ಮಹಿಮಾವಂತನಾದರೂ ನಾಗರಾಜನ ಮನೆ ಕಾಡಿನಲ್ಲಿನ ಒಂದು ಹುತ್ತ ಅಷ್ಟೇ!
ನುಡಿ ೪: ಶಿವನ ಉದಾಹರಣೆ - ಮೂರು ಲೋಕಗಳ ಒಡೆಯನೆಂದು ಪ್ರಸಿದ್ಧನಾದ, ಪಾರ್ವತೀಪತಿಯಾದ, ಮೂರುಕಣ್ಣುಳ್ಳ ಶಿವನ ಮನೆ ಊರ ಹೊರಗಿನ ಸ್ಮಶಾನ ಅಷ್ಟೇ ಎಂದು ವೇದಗಳೇ ಸಾರುತ್ತಿವೆ!
ನುಡಿ ೫: ಎಂತಹ ಮಹಿಮಾವಂತನಾದರೂ ಪೂರ್ವಕರ್ಮ ಫಲವನ್ನು ಬದಲಾಯಿಸಲಾಗದು. ಈ ಜಗತ್ತಲ್ಲಿ ಯಾರೂ ತಿದ್ದಿದವರಿಲ್ಲ. ಎಲ್ಲರ ವಿಧಿಯನ್ನು ನಿರ್ಧರಿಸುವ ಶ್ರೀಹರಿಯೇ, ನಿನ್ನ ಕೃಪಾದೃಷ್ಟಿಯನ್ನು ಬೀರು.