ಬೇಗ ಬಾರೋ ವೇಲಾಪುರದ ಚೆನ್ನ - ವಾದಿರಾಜರು
ಈ ಕೃತಿಯನ್ನು ಆನಂದಭೈರವಿ ರಾಗದಲ್ಲಿ ಇಲ್ಲಿ ಕೇಳಿ.
।। ಬೇಗ ಬಾರೋ ಬೇಗ ಬಾರೋ । ವೇಲಾಪುರದ ಚೆನ್ನ ಬೇಗ ಬಾರೋ ।।ಪ।।
।। ಬೇಗ ಬಾರೋ ಬೇಗ ಬಾರೋ । ನೀಲಮೇಘವರ್ಣ ಬಾರೋ ।।ಅ.ಪ।।
।। ಇಂದಿರೆ ರಮಣ ಗೋವಿಂದ ಬೇಗ ಬಾರೋ ।
ನಂದನ ಕಂದ ಮುಕುಂದ ಬೇಗ ಬಾರೋ ।।೧।।
।। ಧೀರ ಉದಾರ ಗಂಭೀರ ಬೇಗ ಬಾರೋ ।
ಹಾರ ಲಂಕಾರ ರಘುವೀರ ಬೇಗ ಬಾರೋ ।।೨।।
।। ಋದ್ಧ ಅನಿರುದ್ಧ ಸುರಾಧಾ ಬೇಗ ಬಾರೋ ।
ಹದ್ದನೇರಿದ ಪ್ರಸಿದ್ಧ ಬೇಗ ಬಾರೋ ।।೩।।
।। ರಂಗ ಉತ್ತುಂಗ ನರಸಿಂಗ ಬೇಗ ಬಾರೋ ।
ಕಂಗಳೆಸೆವ ಮೋಹನಾಂಗ ಬೇಗ ಬಾರೋ ।।೪।।
।। ಅಯ್ಯ ವಿಜಯ ಸಾಹಾಯ್ಯ ಬೇಗ ಬಾರೋ ।
ಜೀಯ ಫಣೀಶಯ್ಯಾ ಹಯವದನ ಬೇಗ ಬಾರೋ ।।೫।।
ಈ ಕೃತಿಯ ಸರಳ ಕನ್ನಡದಲ್ಲಿನ ಅರ್ಥ
ವಾದಿರಾಜ ಯತಿಗಳು ಶ್ರೀಹರಿಯನ್ನು ಬೇಗ ಬಾರೋ ಎಂದು ಬಗೆಬಗೆಯಾಗಿ ಕರೆಯುತ್ತಿರುವರು ಈ ಕೃತಿಯಲ್ಲಿ. ಬೇಲೂರು ಚೆನ್ನಕೇಶವನಾದ ನೀಲ ಮೋಡಗಳ ಬಣ್ಣದವನಾದ ಹರಿಯೇ ಬೇಗ ಬಾ ಎಂದು ಆದರಿಸಿದ್ದಾರೆ ಪಲ್ಲವಿಯಲ್ಲಿ.ನುಡಿ ೧: ಇಂದಿರೆ ಅಥವಾ ಲಕ್ಷ್ಮಿಯ ಪ್ರಿಯನಾದ ಗೋವಿಂದನೇ, ನಂದಗೋಪನ ಕಂದನಾದ ಕೃಷ್ಣನೇ ಬೇಗ ಬಾರೋ.
ನುಡಿ ೨: ಧೈರ್ಯವಂತನೇ, ದಾನಶೀಲನೇ, ಗಂಭೀರ ಚರಿತನೇ, ಲಂಕೆಗೆ ಸಮುದ್ರ ದಾಟಿ ಹೋದವನಾದ ರಾಮನೇ ಬೇಗ ಬಾರೋ .
ನುಡಿ ೩: ಭಗವಂತನೇ, ಯಾರಿಂದಲೂ ಹಿಡಿಯಲಾರದವನೇ, ಎಲ್ಲವನ್ನೂ ಉಳ್ಳವನೇ, ಗರುಡವಾಹನನೆಂದು ಪ್ರಸಿದ್ಧನಾದ ಹರಿಯೇ ಬೇಗ ಬಾರೋ.
ನುಡಿ ೪: ರಂಗನಾಥನೇ, ಎಲ್ಲದಕ್ಕಿಂತ ಉತ್ತಮನಾದವನೇ, ನರಸಿಂಹಾವತಾರನೇ, ಕಣ್ಣುಗಳು ತುಂಬಿಕೊಳ್ಳಲು ಸಾಲದ ಚೆಲುವು ಉಳ್ಳವನೇ ಬೇಗ ಬಾರೋ.
ನುಡಿ ೫: ಎಲ್ಲರಿಗೂ ಹಿರಿಯನಾದವನೇ, ಅರ್ಜುನನ ಸಾರಥಿಯಾದವನೇ, ಎಲ್ಲರ ಒಡೆಯನೇ, ಹಾವಿನ ಮೇಲೆ ಮಲಗಿದವನೇ ಹರಿಯೇ ಬೇಗ ಬಾರೋ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ