ಗುರುವಾರ, ಏಪ್ರಿಲ್ 19, 2018

sharaNu shree guru rAghavEndrage - jagannAthadAsaru

ಶರಣು ಶ್ರೀಗುರುರಾಘವೇಂದ್ರಗೆ - ಜಗನ್ನಾಥದಾಸರು 

ಭೀಂಪಲಾಸ್ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ಶರಣು ಶ್ರೀಗುರುರಾಘವೇಂದ್ರಗೆ । ಶರಣು ಯತಿಕುಲ ತಿಲಕಗೆ ।।ಪ।।
।। ಶರಣು ಶರಣರ ಪೊರೆವ ಕರುಣಿಗೆ । ಶರಣು ಹರಿಗುಣಲೋಲಗೆ ।।ಅ.ಪ.।।

।। ನಿತ್ಯ ನಿರ್ಮಲ ಪುಣ್ಯಗಾತ್ರಗೆ । ಭೃತ್ಯಪಾಲಕ ಸುಗುಣಪಾತ್ರಗೆ ।।
।। ಸತ್ಯ ಜ್ಞಾನ ಸುಮೋದ ನೇತ್ರಗೆ । ಸ್ತುತ್ಯ ಯತಿವರ ಸುಗುಣಮಿತ್ರಗೆ ।।೧।।

।। ಮೋದದಾಯಕ ಭೇದಸಾಧಕ । ಮೇದಿನೀಸುರಜಾಲ ನಾಯಕ ।।
।। ಮೋದತೀರ್ಥರ ಚರಣಸೇವಕ । ಆದಿಗುರು ಜಗನ್ನಾಥವಿಠ್ಠಲ ದೂತಗೆ ।।೨।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ 

ಮಂತ್ರಾಲಯ ಪ್ರಭುಗಳಾದ ಗುರುರಾಯರೆಂದೆನಿಸಿದ ರಾಘವೇಂದ್ರ ಸ್ವಾಮಿಗಳ ಸ್ತುತಿ ಮಾಡಿದ್ದಾರೆ ಜಗನ್ನಾಥದಾಸರು. 
ಪಲ್ಲವಿ:  ರಾಘವೇಂದ್ರ ಸ್ವಾಮಿಗಳಿಗೆ, ಯತಿಗಳಲ್ಲಿ ಮುಖ್ಯರೆಂದೆನಿಸದವರಿಗೆ ಶರಣು. 
ಅನುಪಲ್ಲವಿ: ಶರಣಾಗತರ ವಾ ಭಕ್ತರ ಸಲಹುವ, ಶ್ರೀಹರಿಯ ಗುಣಗಳ ಸದಾ ಸ್ತುತಿಸುವ ರಾಯರಿಗೆ ಶರಣು. 
ನುಡಿ ೧: ಸದಾ ಶುಭ್ರಚರಿತರಾದ, ಪುಣ್ಯವಂತರಾದ, ಸೇವಕರ ಸಲಹುವ, ಸದ್ಗುಣವಂತರಾದ, ಸತ್ಯ-ಜ್ಞಾನ-ಆನಂದಗಳೆಂಬ ತತ್ವದ ಅನುಭಾವಿಗಳಾದ, ಸ್ತುತಿಗೆ ಪಾತ್ರರಾದ,  ಸನ್ಯಾಸಿಗಳಲ್ಲಿ ಶ್ರೇಷ್ಠರಾದ ರಾಯರಿಗೆ ಶರಣು. 
ನುಡಿ ೨: ಭಕ್ತರಿಗೆ ಆನಂದವನ್ನು ಕೊಡುವ, ಪಂಚಭೇದ ತತ್ವವನ್ನು ಸಾಧಿಸಿದ, ಸುಜ್ಞಾನಿಗಳ ನಾಯಕನಾದ, ಮಧ್ವಾಚಾರ್ಯರ ಸೇವಿಸುವ ಶಿಷ್ಯನಾದ, ಶ್ರೀಹರಿಯ ದೂತನಾದ ರಾಯರಿಗೆ ಶರಣು. 

eesa bEku iddu jayisa bEku - purandaradAsaru

ಈಸ ಬೇಕು ಇದ್ದು ಜಯಿಸಬೇಕು - ಪುರಂದರದಾಸರು

ಈ ಕೃತಿಯನ್ನು ಧನ್ಯಾಸಿ ರಾಗದಲ್ಲಿ ಇಲ್ಲಿ ಕೇಳಿ


।। ಈಸ ಬೇಕು ಇದ್ದು ಜಯಿಸಬೇಕು ।।ಪ।।
।। ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ।।ಅ.ಪ.।।

।। ತಾಮರಸ ಜಲದಂತೆ ಪ್ರೇಮವಿತ್ತು ಭವದೊಳು ।
ಸ್ವಾಮಿ ರಾಮನೆನುತ ಪಾಡಿ ಕಾಮಿತಕ್ಕೆ ಕೊಂಬೊರೆಲ್ಲ ।।೧।।

।। ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ ।
ಮೀರಿ ಆಸೆ ಮಾಡದ್ಹಾಂಗೆ ಧೀರ ಕೃಷ್ಣನ ನೆನೆವರೆಲ್ಲ ।।೨।।

।। ಮಾಂಸದಾಸೆಗೆ ಸಿಲುಕಿ ಮತ್ಸ್ಯ ಹಿಂಸೆಪಟ್ಟ ಪರಿಯಂತೆ ।
ಮೋಸಹೋಗದ್ಹಾಂಗೆ ಜಗದೀಶ ಪುರಂದರವಿಠ್ಠಲನೆನುತ ।।೩।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ

ಕರ್ಮಸಿದ್ಧಾಂತದ ಸಾರವನ್ನೆಲ್ಲಾ ಎರಡೇ ಸಾಲಿನಲ್ಲಿ ಅಡಗಿಸಿಟ್ಟಿರುವರು ಪುರಂದರದಾಸರು. ಈ ಸಂಸಾರದ ಅಥವಾ ನಮ್ಮ ಜೀವನದ ಸುಖದುಃಖಗಳ ಜಂಜಾಟದಲ್ಲಿ ಪ್ರತಿಫಲದ ಅಪೇಕ್ಷೆ ಇಲ್ಲದೆ ಕರ್ತವ್ಯಗಳನ್ನು ಮಾಡಬೇಕು, ಮಾಡಿ ಮುಕ್ತಿಯನ್ನು ಜಯಿಸಬೇಕು. 
ನುಡಿ ೧: ಹೇಗೆ ತಾವರೆಯ ಎಲೆಯ ಮೇಲಿರುವ ನೀರಿನ ಹನಿ ಅಂತದೆಯೇ ಇರುವುದೋ, ಹಾಗೆಯೇ ಈ ಜೀವನದಲ್ಲಿ ಇದ್ದೂ ಅದರ ಒಳಿತು-ಕೆಡಕುಗಳನ್ನು ಅಂಟಿಸಿಕೊಳ್ಳದಂತೆ, ಪ್ರತಿಯೊಂದು ಕೆಲಸವನ್ನೂ ಶ್ರೀಹರಿಯ ಕೆಲಸವೆಂದು ಭಾವಿಸಬೇಕು. 
ನುಡಿ ೨: ಗೇರುಹಣ್ಣಿನಲ್ಲಿ ಬೀಜವು ಹೇಗೆ ಹೊರಗೆ ಅಂಟಿರುವುದೋ, ಹಾಗೆಯೇ ಈ ಸಂಸಾರಕ್ಕೆ ಅಂಟಿಕೊಂಡಿದ್ದರೂ ಮನಸ್ಸನ್ನೆಲ್ಲ ಶ್ರೀಹರಿಯಲ್ಲಿ ಇಟ್ಟು, ಅತಿಯಾಸೆ ಮಾಡದೆ ಅಂದರೆ ಎಲ್ಲವೂ ಶ್ರೀಹರಿಯ ಕೃಪೆ ಎಂದು ಭಾವಿಸಿ ಬದುಕಬೇಕು. 
ನುಡಿ ೩: ಮೀನು ಹಿಡಿಯಲು ಗಾಳದ ತುದಿಯಲ್ಲಿ ಮಾಂಸವನ್ನು ಸಿಕ್ಕಿಸುವುದುಂಟು. ಆ ಮಾಂಸದ ತುಂಡುಗೆ ಆಸೆಪಟ್ಟು ಮೀನು ಹೇಗೆ ಗಾಳಕ್ಕೆ ಸಿಕ್ಕಿಬೀಳುತ್ತದೆಯೋ ಹಾಗೆಯೇ ನಾವು ಈ ಸಂಸಾರದ ಕ್ಷಣಿಕ ಸುಖಗಳಿಗೆ ಆಸೆಪಟ್ಟರೆ ಬವಣೆಪಡಬೇಕಾಗುವುದು. ಇದರಿಂದ ತಪ್ಪಿಸಿಕೊಳ್ಳಲು ಕೇವಲ ಕರ್ತವ್ಯಗಳನ್ನು ಮಾಡುತ್ತಾ ಅವುಗಳ ಫಲ-ಅಫಲಗಳ ಆಸೆಯನ್ನು ಬಿಟ್ಟು  ಶ್ರೀಹರಿಯ ಧ್ಯಾನ ಮಾಡಬೇಕು. 

ಶುಕ್ರವಾರ, ಏಪ್ರಿಲ್ 6, 2018

jo jo shree krishna - purandaradAsaru

ಜೋಜೋ ಶ್ರೀಕೃಷ್ಣ ಪರಮಾನಂದ - ಪುರಂದರದಾಸರು 

ಈ ಕೃತಿಯನ್ನು ಕುರಂಜಿ ರಾಗದಲ್ಲಿ ಇಲ್ಲಿ ಕೇಳಿ


।। ಜೋಜೋ ಶ್ರೀಕೃಷ್ಣ ಪರಮಾನಂದ ।
ಜೋಜೋ ಗೋಪಿಯ ಕಂದ ಮುಕುಂದ ।।ಪ।।

।। ಪಾಲಗಡಲದೊಳು  ಪವಡಿಸಿದವನೇ 
ಆಲದೆಲೆಯ ಮೇಲೆ ಮಲಗಿದ ಶಿಶುವೇ ।
। ಶ್ರೀಲತಾಂಗಿಯಳ ಚಿತ್ತದೊಲ್ಲಭನೇ 
ಬಾಲ ನಿನ್ನನು ಪಾಡಿ ತೂಗುವೆನಯ್ಯಾ ।।೧।।

।। ಹೊಳೆವಂಥ ರನ್ನದ ತೊಟ್ಟಿಲ ಮೇಲೆ 
ಥಳಥಳಿಸುವ ಗುಲಗಂಜಿ ಮಾಲೆ ।
। ಅಳದೆ ನೀ ಪಿಡಿದಾಡೆನ್ನಯ ಬಾಲ 
ನಳಿನನಾಭನೇ ನಿನ್ನ ಪಾಡಿ ತೂಗುವೆನು ।।೨।।

।। ಆರ ಕಂದ ನೀನಾರ ನಿಧಾನೀ 
ಯಾರ ರತುನವೋ ನೀನಾರ ಮಾಣಿಕವೋ ।
। ಸೇರಿತು ಎನಗೊಂದು ಚಿಂತಾಮಣಿಯೆಂದು 
ಪೋರ ನಿನ್ನನು ಪಾಡಿ ತೂಗುವೆನಯ್ಯಾ ।।೩।।

।। ಗುಣನಿಧಿಯೇ ನಿನ್ನನೆತ್ತಿಕೊಂಡರೆ 
ಮನೆಯ ಕೆಲಸವಾರು ಮಾಡುವರಯ್ಯಾ ।
। ಮನಕೆ ಸುಖನಿದ್ರೆಯ ತಂದುಕೊ ಬೇಗ 
ಫಣಿಶಯನನೇ ನಿನ್ನ ಪಾಡಿ ತೂಗುವೆನು ।।೪।।

।। ಅಂಡಜವಾಹನ ಅನಂತಮಹಿಮ 
ಪುಂಢರೀಕಾಕ್ಷ ಶ್ರೀ ಪರಮಪಾವನ್ನ ।
। ಹಿಂಡುದೈವರಗಂಡ ಉದ್ದಂಡನೇ 
ಪಾಂಡುರಂಗ ಶ್ರೀ ಪುರಂದರವಿಠ್ಠಲ ।।೫।।

bEga bAro - vAdirAjaru

ಬೇಗ ಬಾರೋ ವೇಲಾಪುರದ ಚೆನ್ನ - ವಾದಿರಾಜರು 

ಈ ಕೃತಿಯನ್ನು ಆನಂದಭೈರವಿ ರಾಗದಲ್ಲಿ ಇಲ್ಲಿ ಕೇಳಿ


।। ಬೇಗ ಬಾರೋ ಬೇಗ ಬಾರೋ । ವೇಲಾಪುರದ ಚೆನ್ನ ಬೇಗ ಬಾರೋ ।।ಪ।।
।। ಬೇಗ ಬಾರೋ ಬೇಗ ಬಾರೋ । ನೀಲಮೇಘವರ್ಣ ಬಾರೋ ।।ಅ.ಪ।।

।। ಇಂದಿರೆ ರಮಣ ಗೋವಿಂದ ಬೇಗ ಬಾರೋ ।
ನಂದನ ಕಂದ ಮುಕುಂದ ಬೇಗ ಬಾರೋ ।।೧।।

।। ಧೀರ ಉದಾರ ಗಂಭೀರ ಬೇಗ ಬಾರೋ ।
ಹಾರ ಲಂಕಾರ ರಘುವೀರ ಬೇಗ ಬಾರೋ ।।೨।।

।। ಋದ್ಧ ಅನಿರುದ್ಧ ಸುರಾಧಾ  ಬೇಗ ಬಾರೋ ।
ಹದ್ದನೇರಿದ ಪ್ರಸಿದ್ಧ ಬೇಗ ಬಾರೋ ।।೩।।

।। ರಂಗ ಉತ್ತುಂಗ ನರಸಿಂಗ ಬೇಗ ಬಾರೋ ।
ಕಂಗಳೆಸೆವ ಮೋಹನಾಂಗ ಬೇಗ ಬಾರೋ ।।೪।।

।। ಅಯ್ಯ ವಿಜಯ ಸಾಹಾಯ್ಯ ಬೇಗ ಬಾರೋ ।
ಜೀಯ ಫಣೀಶಯ್ಯಾ ಹಯವದನ ಬೇಗ ಬಾರೋ ।।೫।।


ಈ ಕೃತಿಯ ಸರಳ ಕನ್ನಡದಲ್ಲಿನ ಅರ್ಥ

ವಾದಿರಾಜ ಯತಿಗಳು ಶ್ರೀಹರಿಯನ್ನು ಬೇಗ ಬಾರೋ ಎಂದು ಬಗೆಬಗೆಯಾಗಿ ಕರೆಯುತ್ತಿರುವರು ಈ ಕೃತಿಯಲ್ಲಿ. ಬೇಲೂರು ಚೆನ್ನಕೇಶವನಾದ ನೀಲ ಮೋಡಗಳ ಬಣ್ಣದವನಾದ ಹರಿಯೇ ಬೇಗ ಬಾ ಎಂದು ಆದರಿಸಿದ್ದಾರೆ ಪಲ್ಲವಿಯಲ್ಲಿ.
ನುಡಿ ೧: ಇಂದಿರೆ ಅಥವಾ ಲಕ್ಷ್ಮಿಯ ಪ್ರಿಯನಾದ ಗೋವಿಂದನೇ, ನಂದಗೋಪನ ಕಂದನಾದ ಕೃಷ್ಣನೇ ಬೇಗ ಬಾರೋ.
ನುಡಿ ೨: ಧೈರ್ಯವಂತನೇ, ದಾನಶೀಲನೇ, ಗಂಭೀರ ಚರಿತನೇ, ಲಂಕೆಗೆ ಸಮುದ್ರ ದಾಟಿ ಹೋದವನಾದ ರಾಮನೇ ಬೇಗ ಬಾರೋ .
ನುಡಿ ೩: ಭಗವಂತನೇ, ಯಾರಿಂದಲೂ ಹಿಡಿಯಲಾರದವನೇ, ಎಲ್ಲವನ್ನೂ ಉಳ್ಳವನೇ, ಗರುಡವಾಹನನೆಂದು ಪ್ರಸಿದ್ಧನಾದ ಹರಿಯೇ ಬೇಗ ಬಾರೋ.
ನುಡಿ ೪: ರಂಗನಾಥನೇ, ಎಲ್ಲದಕ್ಕಿಂತ ಉತ್ತಮನಾದವನೇ, ನರಸಿಂಹಾವತಾರನೇ, ಕಣ್ಣುಗಳು ತುಂಬಿಕೊಳ್ಳಲು ಸಾಲದ ಚೆಲುವು ಉಳ್ಳವನೇ ಬೇಗ ಬಾರೋ.
ನುಡಿ ೫: ಎಲ್ಲರಿಗೂ ಹಿರಿಯನಾದವನೇ, ಅರ್ಜುನನ ಸಾರಥಿಯಾದವನೇ, ಎಲ್ಲರ ಒಡೆಯನೇ, ಹಾವಿನ ಮೇಲೆ ಮಲಗಿದವನೇ ಹರಿಯೇ ಬೇಗ ಬಾರೋ. 

ಶುಕ್ರವಾರ, ಮಾರ್ಚ್ 9, 2018

mADu sikkadalla - purandaradAsaru

ಮಾಡು ಸಿಕ್ಕದಲ್ಲ - ಪುರಂದರದಾಸರು 

ಮಾಯಮಾಳವಗೌಳ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ಮಾಡು ಸಿಕ್ಕದಲ್ಲಾ ಮಾಡಿನ । ಗೂಡು ಸಿಕ್ಕದಲ್ಲಾ ।।ಪ।।
।। ಜೋಡುಹೆಂಡಿರಂಜಿ ಓಡಿ ಹೋಗುವಾಗ । ಗೋಡೆ ಬಿದ್ದು ಬಯಲಾಯಿತಲ್ಲ ।।ಅ.ಪ।।

।। ಎಚ್ಚರಗೊಳಲಿಲ್ಲ ಮನವೇ । ಹುಚ್ಚನಾದೆನಲ್ಲಾ ।।
।। ಅಚ್ಚಿನೊಳಗೆ ಮೆಚ್ಚು । ಮೆಚ್ಚಿನೊಳಗೆ ಅಚ್ಚು ।।
।। ಕಿಚ್ಚೆದ್ದು ಹೋಯಿತಲ್ಲಾ । ಮಾಡು ಸಿಕ್ಕದಲ್ಲಾ ।।೧।।

।। ಮುಪ್ಪು ಬಂದಿತಲ್ಲಾ ತಪ್ಪದೆ । ಪಾಯಸ ಉಣಲಿಲ್ಲಾ ।।
।। ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ । ಧೊಪ್ಪನೆ ಬಿತ್ತಂತಾಯಿತಲ್ಲಾ ।।೨।।

।। ಯೋಗವು ಬಂತಲ್ಲಾ ಅದುಪರಿ- । ಭಾಗವಾಯಿತಲ್ಲಾ ।।
।। ಭೋಗಿಶಯನ ಶ್ರೀಪುರಂದರವಿಠ್ಠಲನ । ಆಗ ನೆನೆಯಲಿಲ್ಲಾ ।।೩।।

ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ 

ವ್ಯರ್ಥವಾಗಿ ಕಳೆದ ಜೀವನದ ಬಗ್ಗೆ ಪಶ್ಚಾತ್ತಾಪಪಡುವ ಚಿಂತನೆಯನ್ನು ಗೂಢವಾಗಿ ಈ ಕೃತಿಯಲ್ಲಿ ವಿವರಿಸುವ ಮೂಲಕ ನಮ್ಮೆಲ್ಲರನ್ನು ಎಚ್ಚರಿಸಿದ್ದಾರೆ ಪುರಂದರದಾಸರು.
ಪಲ್ಲವಿ: ಉತ್ಕೃಷ್ಟ ವಸ್ತುಗಳನ್ನು ಇರಿಸುವ ಮಾಡದ ಗೂಡು ಸಿಕ್ಕದಾಯಿತಲ್ಲಾ. ಒಳಾರ್ಥವಾಗಿ ಬದುಕಿನ ಸಾರ್ಥಕ್ಯ, ಮುಕ್ತಿ ಸಾಧನ ಕೈಗೆ ಎಟುಕದಾಯಿತಲ್ಲಾ. ಇಬ್ಬರು ಹೆಂಡತಿಯರು ಎಂದರೆ ಹಗಲು-ರಾತ್ರಿಗಳು ಕಾಲದ ವೇಗಕ್ಕೆ ಹೆದರಿ ಓಡುವಾಗ, ಗೋಡೆ ಬಿದ್ದು ಎಂದರೆ ದೇಹವು ಶಿಥಿಲವಾಗಿ, ಬಯಲಾಯಿತಲ್ಲಾ ಎಂದರೆ ಎಲ್ಲಾ ಇಹ ಲೋಕದ ಸುಖಗಳು ಇಲ್ಲವಾಯಿತಲ್ಲಾ ಎಂದು.
ನುಡಿ ೧: ಎಚ್ಚರಗೊಳ್ಳದೆಯೇ ಮನಸ್ಸು ಈಗ ಹುಚ್ಚುಹಿಡಿದಂತಾಯಿತಲ್ಲಾ. ಅಚ್ಚು ಎಂದರೆ ಈ ದೇಹ. ಈ ದೇಹದಿಂದ ಸಿಗುವ ಸುಖವನ್ನೇ ಬಯಸಿ, ಆ ಬಯಕೆಗಳಲ್ಲಿ ಮನಸ್ಸನ್ನು ತೊಡಗಿಸಿ, ಕೊನೆಗೆ ಕಿಚ್ಚು ಹೋಯಿತಲ್ಲ ಎಂದರೆ ದೇಹದಾರ್ಢ್ಯ ಹೋಗಿ ಮುಪ್ಪಾಯಿತಲ್ಲಾ ಎಂದು.
ನುಡಿ ೨: ಮುಪ್ಪು ಬರುವಾ ಮುನ್ನಾ ಮುಕ್ತಿಸಾಧನೆ ಮಾಡಲಿಲ್ಲವಲ್ಲಾ. ಮಾನವಜನ್ಮ ಎಂಬ ತುಪ್ಪದ ಬಿಂದಿಗೆ ವ್ಯರ್ಥವಾಗಿ ತಿಪ್ಪೆಗೆ ಬಿದ್ದಂತೆ ಆಯಿತಲ್ಲಾ.
ನುಡಿ ೩: ಮಾನವಜನ್ಮದ ಮುಕ್ತಿಸಾಧನೆಗೆ ಯೋಗ್ಯವಾದ ಶರೀರ ಬಂದಿತ್ತು. ಆದರೆ ಅದರ ಸದುಪಯೋಗವಾಗದೆಯೇ ಈ ಶರೀರ ಶಿಥಿಲವಾಗಿದೆಯಲ್ಲಾ. ಗಟ್ಟಿ-ಮುಟ್ಟಾದ ಕಾಲದಲ್ಲಿ ಶ್ರೀಹರಿಯ ಧ್ಯಾನ ಮಾಡದೆಯೇ ವ್ಯರ್ಥವಾಗಿ ಕಾಲ ಕಳೆದೆನಲ್ಲಾ.

neere nee karetaare - purandaradAsaru

ನೀರೇ ನೀ ಕರಿತಾರೆ - ಪುರಂದರದಾಸರು

ದೇಶ್ ರಾಗದಲ್ಲಿ ಈ ಕೃತಿಯನ್ನು ಇಲ್ಲಿ ಕೇಳಿ


।। ನೀರೇ ನೀ ಕರಿತಾರೆ ಸುಂದರನ । ಮಾರಸುಂದರನ ಸುಕುಮಾರ ಶರೀರನ ।।ಪ।। 
।। ಗೊಲ್ಲರ ಮನೆಯೊಳಗೆ ಇದ್ದ ಪಾಲ್ಮೊಸರ । ಮೆಲ್ಲನೆ ಮೆಲ್ಲುವ ವಲ್ಲಭ ಹರಿಯ ।।೧।।
।। ಯಾದವರೆಲ್ಲರ ಆದರಿಸಿದನ ವೇದ- । ವೇದಾಂತನ ಯಾದವ ಪ್ರಿಯನ ।।೨।।
।। ವರಗೌರಿಪುರದಲ್ಲಿ ವಾಸವಾಗಿಹನ । ವರದ ಪುರಂದರವಿಠ್ಠಲ ರಾಯನ ।।೩।।

enagoo aaNe ranga - purandaradAsaru

ಎನಗೂ ಆಣೆ ರಂಗ ನಿನಗೂ ಆಣೆ - ಪುರಂದರದಾಸರು

ಈ ಕೃತಿಯನ್ನು ನೀಲಾಂಬರಿ ರಾಗದಲ್ಲಿ ಇಲ್ಲಿ ಕೇಳಿ


।। ಎನಗೂ ಆಣೆ ರಂಗ ನಿನಗೂ ಆಣೆ ।
ಎನಗೂ ನಿನಗೂ ಇಬ್ಬರಿಗೂ ನಿನ ಭಕ್ತರಾಣೆ ।।ಪ।।

।। ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ ।
ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ ।।೧।।

।। ತನುಮನಧನದಲಿ ವಂಚಕನಾದರೆ ಎನಗೆ ಆಣೆ ರಂಗ ।
ಮನಸು ನಿನ್ನಲಿ ನಿಲ್ಲಿಸದಿದ್ದರೆ ನಿನಗೆ ಆಣೆ ।।೨।।

।। ಕಾಕುಮನುಜರ ಸಂಗವ ಮಾಡಿದರೆನಗೆ ಆಣೆ ರಂಗ ।
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ ।।೩।।

।। ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ ।
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ ।।೪।।

।। ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ।
ಪುರಂದರವಿಠಲ ನೀನೊಲಿಯದಿದ್ದರೆ ನಿನಿಗೆ ಆಣೆ ।।೫।।


ಸರಳ ಕನ್ನಡದಲ್ಲಿ ಈ ಕೃತಿಯ ಅರ್ಥ

ವರ್ತಕರು ತಮ್ಮ ವ್ಯಾಪಾರದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ, ಗೆಳೆಯರು ಆಟದಲ್ಲಿ ಒಪ್ಪಂದ ಮಾಡಿಕೊಳ್ಳುವಂತೆ, ದಾಸರು ಶ್ರೀಹರಿಯ ಜೊತೆ ಒಪ್ಪಂದದ ಮಾತನಾಡುತ್ತಿದ್ದಾರೆ ಈ ಕೃತಿಯಲ್ಲಿ. ಒಬ್ಬರಿನ್ನೊಬ್ಬರಿಗೆ ನಿಬಂಧ ಹಾಕಿಕೊಳ್ಳುವುದರಲ್ಲಿ ಪರಸ್ಪರ ಭಾವಾನುಬಂಧವು ಎದ್ದು ತೋರುತ್ತಿದೆ ಈ ದಾಸವಾಣಿಯಲ್ಲಿ. 
ಪಲ್ಲವಿ: ನನಗೊಂದು ನಿಬಂಧವಾದರೆ ನಿನಗೆ (ಶ್ರೀಹರಿಗೆ) ಮತ್ತೊಂದು ನಿಬಂಧ. ಮತ್ತು ನಮ್ಮಿಬ್ಬರಿಗೂ ನಮ್ಮ ಮಾತುಗಳನ್ನು ತಪ್ಪದಿರಲು  ಭಕ್ತರ ನಿಬಂಧನೆ.
ನುಡಿ ೧: ನಿನ್ನ ಬಿಟ್ಟು ಬೇರಾರನ್ನೂ ಭಜಿಸುವುದಿಲ್ಲ ಎಂಬುದು ನನ್ನ ನಿಬಂಧ/ಮಾತು. ಇದು ಸತ್ಯವಾಗಬೇಕಿದ್ದರೆ ನೀನು ನನ್ನ ಕೈಬಿಡುಬಾರದು.
ನುಡಿ ೨: ದೇಹಶಕ್ತಿ, ಮನಶ್ಶಕ್ತಿ, ಧನಶಕ್ತಿ ಯಾವುದರಿಂದಲೂ ವಂಚನೆ ಮಾಡುವುದಿಲ್ಲ ಎಂಬದು ನನ್ನ ಮಾತು. ಇದು ನಡೆಯಬೇಕಾದರೆ ನೀನು ನನ್ನ ಮನಸ್ಸನ್ನು ನಿನ್ನಲ್ಲಿ ನಿಲ್ಲಿಸಬೇಕು (ಅಥವಾ ನನ್ನಲ್ಲಿ ನಿನ್ನ ಭಕ್ತಿಯನ್ನು ಸ್ಥಿರವಾಗಿಸಬೇಕು).  
ನುಡಿ ೩: ಕೆಟ್ಟ ಜನರ ಸಹವಾಸ ಮಾಡುವುದಿಲ್ಲ ಎಂಬುದು ನನ್ನ ಮಾತು. ಇದಕ್ಕೆ ಪ್ರತಿಯಾಗಿ ನೀನು ಈ ಲೋಕದ ಮೇಲಿನ ಆಸೆ ಅಥವಾ ಸಂಸಾರದ ಮೋಹವನ್ನು ಬಿಡಿಸಬೇಕು. 
ನುಡಿ ೪: ಸಜ್ಜನರ ಒಡನಾಟ ಮಾಡದೆಯೇ ಇರುವುದಿಲ್ಲ ಎಂಬುದು ನನ್ನ ಮಾತಾದರೆ, ನೀನು ಕೆಟ್ಟವರ ಒಡನಾಟವನ್ನು ಬಿಡಿಸದೆ ಇರುವಂತಿಲ್ಲ.
ನುಡಿ ೫: ನಿನ್ನ ನಂಬದೆಯೇ ನಾನು ಬದುಕಲಾರೆ ಎಂಬುದು ನನ್ನ ಮಾತು. ಇದಕ್ಕೆ ಪ್ರತಿಯಾಗಿ ನೀನು ನನಗೆ ಒಲಿಯಬೇಕು ಅಥವಾ ನನ್ನನ್ನು ಸಲಹಬೇಕು.